ಕದನ ವಿರಾಮ ಪ್ರಸ್ತಾಪಕ್ಕೆ ರಶ್ಯದ ನಿರಾಸಕ್ತಿಯು ಯುದ್ಧ ಮುಂದುವರಿಸುವ ಸೂಚನೆ: ಝೆಲೆನ್ಸ್ಕಿ

ಝೆಲೆನ್ಸ್ಕಿ | PTI
ಕೀವ್: ಉಕ್ರೇನ್ ನಲ್ಲಿನ ಯುದ್ಧಕ್ಕೆ 30 ದಿನಗಳ ತಾತ್ಕಾಲಿಕ ಕದನ ವಿರಾಮದ ಬಗ್ಗೆ ಅಮೆರಿಕದ ಪ್ರಸ್ತಾಪಕ್ಕೆ ರಶ್ಯದಿಂದ ಯಾವುದೇ `ಅರ್ಥಪೂರ್ಣ' ಉತ್ತರ ಬಾರದಿರುವುದು, ರಶ್ಯವು ಉಕ್ರೇನ್ ನಲ್ಲಿ ಹೋರಾಟ ಮುಂದುವರಿಸುವ ಇರಾದೆ ಹೊಂದಿರುವುದನ್ನು ಸೂಚಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಗುರುವಾರ ಹೇಳಿದ್ದಾರೆ.
ಒಂದು ದಿನಕ್ಕೂ ಹೆಚ್ಚು ಸಮಯದಿಂದ ಜಗತ್ತು ರಶ್ಯದಿಂದ ಅರ್ಥಪೂರ್ಣ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಆದರೆ ರಶ್ಯದಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಇದು ರಶ್ಯ ಯುದ್ಧವನ್ನು ದೀರ್ಘಾವಧಿಗೆ ಕೊಂಡೊಯ್ಯಲು ಮತ್ತು ಶಾಂತಿಯ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸಮಯ ವಿಳಂಬಿಸಲು ಬಯಸುತ್ತಿರುವುದನ್ನು ಸ್ಪಷ್ಟಪಡಿಸಿದೆ. ಅಮೆರಿಕದ ಒತ್ತಡವು ಯುದ್ಧ ಕೊನೆಗೊಳಿಸಲು ರಶ್ಯವನ್ನು ಒಪ್ಪಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದಕ್ಕೂ ಮುನ್ನ ರಶ್ಯ ಅಧ್ಯಕ್ಷರ ಸಹಾಯಕರು ಕದನ ವಿರಾಮ ಪ್ರಸ್ತಾಪವನ್ನು ಟೀಕಿಸಿದ್ದು ಇದು ಉಕ್ರೇನ್ ಮಿಲಿಟರಿಗೆ `ಉಸಿರಾಟದ ಸಮಯವನ್ನು' ಒದಗಿಸುತ್ತದೆ ಎಂದಿದ್ದರು. ಅಮೆರಿಕ-ಉಕ್ರೇನ್ ನ ಪ್ರಸ್ತಾಪವು ಉಕ್ರೇನ್ ಮಿಲಿಟರಿಗೆ ಉಸಿರಾಟದ ಸಮಯವನ್ನು ನೀಡಲಷ್ಟೇ ಶಕ್ತವಾಗುತ್ತದೆ. ರಶ್ಯದ ಕಾನೂನುಬದ್ಧ ಹಿತಾಸಕ್ತಿಗಳನ್ನು ಖಾತರಿಗೊಳಿಸುವ ದೀರ್ಘಾವಧಿಯ ಶಾಂತಿ ಪ್ರಕ್ರಿಯೆಯನ್ನು ರಶ್ಯ ಬಯಸುತ್ತದೆ ಎಂದು ರಶ್ಯ ಅಧ್ಯಕ್ಷರ ಸಹಾಯಕ ಯೂರಿ ಉಷಕೋವ್ ಹೇಳಿರುವುದಾಗಿ ವರದಿಯಾಗಿದೆ.