ಸಿರಿಯಾ ಬಂಡುಕೋರರ ನೆಲೆಯ ಮೇಲೆ ರಶ್ಯದ ವೈಮಾನಿಕ ದಾಳಿ; 8 ಮಂದಿ ಮೃತ್ಯು
ಬೈರೂತ್: ಸಿರಿಯಾದ ವಾಯವ್ಯದಲ್ಲಿರುವ ಬಂಡುಗೋರರ ನೆಲೆಯನ್ನು ಗುರಿಯಾಗಿಸಿಕೊಂಡು ಸೋಮವಾರ ಬೆಳಿಗ್ಗೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 8 ಸಶಸ್ತ್ರ ಹೋರಾಟಗಾರರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಶ್ಯನ್ ಯುದ್ಧವಿಮಾನಗಳು ಇದ್ಲಿಬ್ ನಗರದ ಪಶ್ಚಿಮ ಹೊರವಲಯದಲ್ಲಿ ಹಯಾತ್ ತಹ್ರೀರ್ ಅಲ್-ಶಮ್(ಎಚ್‍ಟಿಎಸ್) ಬಂಡುಗೋರರ ನೆಲೆಯನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದ್ದು 8 ಸಶಸ್ತ್ರ ಹೋರಾಟಗಾರರು ಹತರಾಗಿದ್ದಾರೆ. ಇತರ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಯ ಸಿರಿಯಾ ನಿಯೋಗದ ಮುಖ್ಯಸ್ಥ ರಮಿ ಅಬ್ದುಲ್ ರಹ್ಮಾನ್ ಹೇಳಿದ್ದಾರೆ.
ಸಿರಿಯಾ ಅಧ್ಯಕ್ಷರ ವಿರುದ್ಧ ಬಂಡೆದ್ದಿರುವ ಎಚ್‍ಟಿಎಸ್ ಇದ್ಲಿಬ್ ಪ್ರಾಂತದ ಕೆಲವು ಪ್ರದೇಶ, ಅದರ ಪಕ್ಕದಲ್ಲಿರುವ ಲಟಾಕಿಯಾ, ಹಮಾ ಮತ್ತು ಅಲೆಪ್ಪೋ ಪ್ರಾಂತದ ಕೆಲವು ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿದೆ. 2011ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಆರಂಭವಾಗಿದ್ದು ಬಂಡುಗೋರರ ಸಂಘಟನೆಗೆ ವಿದೇಶದ ಕೆಲವು ಭಯೋತ್ಪಾದಕ ಸಂಘಟನೆಗಳು ನೆರವು ನೀಡಿದ್ದರಿಂದ ಆರಂಭದಲ್ಲಿ ಸರಕಾರಿ ಪಡೆ ತೀವ್ರ ಹಿನ್ನಡೆ ಎದುರಿಸಿತ್ತು.
ಆದರೆ 2015ರಲ್ಲಿ ಸಿರಿಯಾ ಸಂಘರ್ಷಕ್ಕೆ ರಶ್ಯ ಪ್ರವೇಶದ ಬಳಿಕ ಸರಕಾರದ ಪಡೆಯ ಕೈ ಮೇಲಾಗಿದ್ದು ಬಂಡುಗೋರ ಪಡೆ ಹಲವು ಪ್ರದೇಶಗಳಿಂದ ಹಿಮ್ಮೆಟ್ಟಿದೆ.