ಉಕ್ರೇನ್ ನ ಒಡೆಸಾ ಮೇಲೆ ರಶ್ಯದ ಡ್ರೋನ್ ದಾಳಿ: 8 ಮಂದಿ ಮೃತ್ಯು
Photo: NDTV
ಕೀವ್: ಉಕ್ರೇನ್ ನ ದಕ್ಷಿಣ ಬಂದರು ನಗರ ಒಡೆಸಾದ ಅಪಾರ್ಟ್ಮೆಂಟ್ ಮೇಲೆ ರಶ್ಯ ನಡೆಸಿದ ಡ್ರೋನ್ ದಾಳಿಯಲ್ಲಿ 4 ತಿಂಗಳ ಶಿಶು ಮತ್ತು ಎರಡು ವರ್ಷದ ಮಗು ಸೇರಿದಂತೆ 8 ಮಂದಿ ಮೃತಪಟ್ಟಿದ್ದು 3 ವರ್ಷದ ಮಗುವಿನ ಸಹಿತ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇರಾನ್ ನಿರ್ಮಿತ ಶಾಹಿದ್ ಡ್ರೋನ್ ಬಳಸಿ ರಶ್ಯ ನಡೆಸಿದ ದಾಳಿಯಲ್ಲಿ ಒಂದು ಅಪಾರ್ಟ್ಮೆಂಟ್ ಬ್ಲಾಕ್ ನ 18 ಅಪಾರ್ಟ್ಮೆಂಟ್ಗಳು ನಾಶಗೊಂಡಿವೆ. ರಕ್ಷಣಾ ತಂಡದವರು ಕಟ್ಟಡದ ಅವಶೇಷಗಳಡಿಯಿಂದ 8 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಗುವಿನ ಸಹಿತ 5 ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಒಡೆಸಾ ಪ್ರಾಂತದ ಗವರ್ನರ್ ಒಲೆಹ್ ಕಿಪರ್ ಹೇಳಿದ್ದಾರೆ. ಮಕ್ಕಳ ಸಹಿತ ಅಮಾಯಕರನ್ನು ಬಲಿಪಡೆದ ಈ ದಾಳಿಯನ್ನು ಮರೆಯಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ ಎಂದು ಆಂತರಿಕ ಸಚಿವ ಇಹೋರ್ ಕ್ಲಿಮೆಂಕೋ ಹೇಳಿದ್ದಾರೆ.
ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ವಿಳಂಬವಾಗಿರದಿದ್ದರೆ ಈ ದುರಂತ ಖಂಡಿತಾ ಸಂಭವಿಸುತ್ತಿರಲಿಲ್ಲ. ಜೀವಗಳು ಬಲಿಯಾಗುತ್ತಿರುವಾಗ ಮತ್ತು ನಮ್ಮ ಪಾಲುದಾರರು ಆಂತರಿಕ ರಾಜಕೀಯ ಆಟಗಳನ್ನು ಆಡುತ್ತಿದ್ದು ನಮ್ಮ ಪ್ರತಿರೋಧ ಶಕ್ತಿಯನ್ನು ಸೀಮಿತಗೊಳಿಸುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ಗೆ ಮಿಲಿಟರಿ ನೆರವು ಒದಗಿಸುವ ಅಮೆರಿಕದ ಪ್ರಸ್ತಾವನೆ ಸಂಸತ್ನಲ್ಲಿ ತಡೆಹಿಡಿಯಲ್ಪಟ್ಟಿರುವುದರಿಂದ ರಶ್ಯ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ತೀವ್ರ ಶಸ್ತ್ರಾಸ್ತ್ರ ಕೊರತೆಯನ್ನು ಎದುರಿಸುತ್ತಿದೆ.