ಉತ್ಪ್ರೇಕ್ಷಿತ ವೀಡಿಯೊ ಪ್ರಸಾರಕ್ಕೆ ರಶ್ಯ ಸೇನೆಯ ಸೂಚನೆ: ವರದಿ
ಸಾಂದರ್ಭಿಕ ಚಿತ್ರ.| Photo: NDTV
ಮಾಸ್ಕೊ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ತಮ್ಮ ಯಶಸ್ಸನ್ನು ಉತ್ಪ್ರೇಕ್ಷಿಸುವ ವೀಡಿಯೊವನ್ನು ಪ್ರದರ್ಶಿಸುವ ಮೂಲಕ ಯೋಧರನ್ನು ಹುರಿದುಂಬಿಸುವಂತೆ ರಶ್ಯದ ಸೇನೆ ಸೂಚಿಸಿದೆ ಎಂದು ಮಿಲಿಟರಿ ಬ್ಲಾಗರ್ ಒಬ್ಬರು ಆರೋಪಿಸಿದ್ದಾರೆ.
ತಮ್ಮ ಕಮಾಂಡರ್ಗಳನ್ನು ಮೆಚ್ಚಿಸಲು ಯಶಸ್ಸಿನ ಸುಳ್ಳು ಸುದ್ಧಿಗಳನ್ನು ವರದಿ ಮಾಡುವಂತೆ ರಶ್ಯದ ಯೋಧರಿಗೆ ಸೂಚಿಸಲಾಗಿದೆ. ಯುದ್ಧದಲ್ಲಿ ಆದ ವಿನಾಶವನ್ನು ತೋರಿಸುವ ನಕಲಿ ವೀಡಿಯೊಗಳನ್ನು, ತಮ್ಮ ಹೆಲಿಕಾಪ್ಟರ್ಗಳು ಹಾಗೂ ಫಿರಂಗಿ ದಳ ನಡೆಸುವ ದಾಳಿಯನ್ನು, ಈ ಹಿಂದೆಯೇ ಹಾನಿಗೊಳಗಾಗಿರುವ ಪಾಶ್ಚಿಮಾತ್ಯರು ಒದಗಿಸಿರುವ ಟ್ಯಾಂಕ್ಗಳ ವೀಡಿಯೊ ಚಿತ್ರೀಕರಣ ನಡೆಸಿ ಅದನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಕರ್ನಲ್ ಶುವಲೋವ್ ಎಂಬ ಹೆಸರಿನಲ್ಲಿ ಪೋಸ್ಟ್ ಮಾಡುವ ಮಿಲಿಟರಿ ಬ್ಲಾಗರ್ರನ್ನು (ಮಿಲಿಟರಿ ಕಾರ್ಯಾಚರಣೆ ಬಗ್ಗೆ ಬ್ಲಾಗ್ ಬರಹ ಬರೆಯುವವರು) ಉಲ್ಲೇಖಿಸಿ `ದಿ ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್(ಐಎಸ್ಡಬ್ಲ್ಯೂ) ವರದಿ ಮಾಡಿದೆ.
ಮಿಲಿಟರಿ ಬ್ಲಾಗರ್ಗಳು ರಶ್ಯದ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡಾ ಅವರಲ್ಲಿ ಹಲವರೊಂದಿಗೆ ನೇರ ಸಭೆ ನಡೆಸುತ್ತಾರೆ. `ಈ ಹಿಂದೆಯೇ ಹಾನಿಗೊಳಗಾಗಿದ್ದ ಅಮೆರಿಕ ನಿರ್ಮಿತ ಸೇನಾವಾಹನವನ್ನು ಗುರಿಯಾಗಿಸಿ ಹೆಲಿಕಾಪ್ಟರ್ಗಳ ಮೂಲಕ ಗುಂಡಿನ ದಾಳಿ ನಡೆಸುವ ವೀಡಿಯೊಗಳನ್ನು ವಿಭಿನ್ನ ಕೋನಗಳಿಂದ ಚಿತ್ರೀಕರಿಸಿ `ಅಮೆರಿಕ ನಿರ್ಮಿತ ಹಲವು ಸೇನಾವಾಹನಗಳ ಧ್ವಂಸ' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ ಎಂದು `ಕರ್ನಲ್ ಶುವಲೋವ್' ಹೇಳಿದ್ದಾರೆ.