ಯುದ್ಧ ಅಂತ್ಯಗೊಳಿಸುವ ಉಕ್ರೇನ್ ಯೋಜನೆಗೆ ರಶ್ಯ ನಕಾರ
ಗುರಿ ಸಾಧಿಸುವವರೆಗೆ ಹೋರಾಟದ ಘೋಷಣೆ
ಸಾಂದರ್ಭಿಕ ಚಿತ್ರ | PC : NDTV
ಮಾಸ್ಕೋ: ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಪ್ರಸ್ತಾಪಿಸಿದ ಯೋಜನೆಯನ್ನು ರಶ್ಯ ಅಧ್ಯಕ್ಷರ ವಕ್ತಾರರು ತಳ್ಳಿಹಾಕಿದ್ದು ರಶ್ಯ ಹೋರಾಟವನ್ನು ಮುಂದುವರಿಸಲಿದೆ ಎಂದಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಝೆಲೆನ್ಸ್ಕಿ, ತನ್ನ ಯೋಜನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಇಬ್ಬರು ಸಂಭಾವ್ಯ ಉತ್ತರಾಧಿಕಾರಿಗಳಿಗೆ ವಿವರಿಸುವುದಾಗಿ ಹೇಳಿದ್ದರು. ಮೂರು ವಾರಗಳ ಹಿಂದೆ ರಶ್ಯದ ಕಸ್ರ್ಕ್ ಪ್ರದೇಶದಲ್ಲಿ ಉಕ್ರೇನ್ ಪಡೆಗಳು ಒಳನುಗ್ಗಿರುವುದು ಈ ಯೋಜನೆಯ ಭಾಗವಾಗಿದೆ. ಆದರೆ ಯೋಜನೆಯ ಇತರ ಅಂಶಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಲಾಗದು ಎಂದಿದ್ದರು. ಯುದ್ಧ ಅಂತ್ಯಗೊಳಿಸುವಂತೆ ರಶ್ಯದ ಮೇಲ್ ಒತ್ತಡ ಹೇರುವುದು ಯೋಜನೆಯ ಪ್ರಮುಖ ಅಂಶವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದರು. ಅಮೆರಿಕ ಪೂರೈಸಿರುವ ದೀರ್ಘ ದೂರ ವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ರಶ್ಯದ ವಿರುದ್ಧ ಬಳಸಲು ಅವಕಾಶ ನೀಡುವಂತೆ ಉಕ್ರೇನ್ ಆಗ್ರಹಿಸುತ್ತಿದೆ.
ಝೆಲೆನ್ಸ್ಕಿ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ` ಕೀವ್ ಆಡಳಿತದ ಪ್ರತಿನಿಧಿಗಳಿಂದ ಇಂತಹ ಹೇಳಿಕೆಗಳನ್ನು ಕೇಳುತ್ತಿರುವುದು ಇದೇ ಮೊದಲಲ್ಲ. ಈ ಕೀವ್ ಆಡಳಿತದ ಸ್ವರೂಪದ ಬಗ್ಗೆ ನಮಗೆ ತಿಳಿದಿದೆ. ನಮ್ಮ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಾವು ಮುಂದುವರಿಸುತ್ತೇವೆ ಮತ್ತು ನಮ್ಮ ಗುರಿಗಳನ್ನು ಸಾಧಿಸಲಿದ್ದೇವೆ' ಎಂದಿದ್ದಾರೆ. ಶಾಂತಿಯುತ ಇತ್ಯರ್ಥದ ಅಗತ್ಯತೆಯ ಬಗ್ಗೆ ಭಾರತದ ದೃಷ್ಟಿಕೋನವನ್ನು ರಶ್ಯ ಬೆಂಬಲಿಸುತ್ತದೆ. ಆದರೆ ಇದೀಗ ಮಾತುಕತೆಗೆ ಯಾವುದೇ ಆಧಾರವಿಲ್ಲ ಎಂದು ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್ ಸಂಘರ್ಷಕ್ಕೆ ತ್ವರಿತ, ಶಾಂತಿಯುತ ಪರಿಹಾರವನ್ನು ತಾನು ಬೆಂಬಲಿಸುವುದಾಗಿ ರಶ್ಯ ಅಧ್ಯಕ್ಷ ಪುಟಿನ್ಗೆ ತಿಳಿಸಿರುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದರು.
ಆಗಸ್ಟ್ 6ರಂದು ಕಸ್ರ್ಕ್ ವಲಯದಲ್ಲಿ ಆರಂಭವಾಗಿರುವ ಉಕ್ರೇನ್ ಪಡೆಗಳ ಆಕ್ರಮಣವನ್ನು ಹಿಮ್ಮೆಟ್ಟಿಸುವತ್ತ ಗಮನ ಹರಿಸಿರುವ ರಶ್ಯ, ಜತೆಗೆ ಪೂರ್ವ ಉಕ್ರೇನ್ನ ಡೊನೆಟ್ಸ್ಕ್ ವಲಯದಲ್ಲಿ ಆಕ್ರಮಣ ತೀವ್ರಗೊಳಿಸಿದೆ. ಯುದ್ಧ ಅಂತ್ಯಗೊಳಿಸುವ ಯಾವುದೇ ಒಪ್ಪಂದವು ಉಕ್ರೇನ್ ನೆಲದ ಮೇಲಿನ ವಾಸ್ತವತೆಯನ್ನು ಒಪ್ಪಿಕೊಳ್ಳುವುದರೊಂದಿಗೆ ಪ್ರಾರಂಭವಾಗಬೇಕು ಎಂದು ಪುಟಿನ್ ಹೇಳುತ್ತಿದ್ದಾರೆ. ಇದರ ಪ್ರಕಾರ, ಪ್ರಸಕ್ತ ಯುದ್ಧದಲ್ಲಿ ರಶ್ಯವು ವಶಕ್ಕೆ ಪಡೆದಿರುವ ಉಕ್ರೇನ್ನ ಕ್ರಿಮಿಯಾ ಹಾಗೂ ಇತರ 4 ಪ್ರಾಂತಗಳ ನಿಯಂತ್ರಣ ರಶ್ಯದ ವಶಕ್ಕೆ ಬರಲಿದೆ. ಈ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ `ಪುಟಿನ್ ಜತೆ ಯಾವುದೇ ಹೊಂದಾಣಿಕೆಗೆ ತಾನು ಸಿದ್ಧವಿಲ್ಲ. ಅವರು ಯುದ್ಧವನ್ನು ರಾಜತಾಂತ್ರಿಕವಾಗಿ ಕೊನೆಗೊಳಿಸಲು ಬಯಸದ ಕಾರಣ ಮಾತುಕತೆಯು ತಾತ್ವಿಕವಾಗಿ ಅರ್ಥಹೀನವಾಗಿದೆ' ಎಂದಿದ್ದಾರೆ. ಕಸ್ರ್ಕ್ ವಲಯದಲ್ಲಿ ಉಕ್ರೇನ್ ಸೇನೆ ಒಳನುಗ್ಗಿದ ಬಳಿಕ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ರಶ್ಯದ ಜತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದ ಸರಕಾರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದ ಅವರು, ಸೆಪ್ಟಂಬರ್ನಲ್ಲಿ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳುವ ನಿರೀಕ್ಷೆಯಿದ್ದು ಆಗ ಬೈಡನ್ ಜತೆ ಸಭೆಗೆ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.