ಡಾಲರ್ ಗೆ ಪರ್ಯಾಯವಾಗಿ ಬ್ರಿಕ್ಸ್ ಕರೆನ್ಸಿ ಬ್ಯಾಂಕ್ ನೋಟ್ ಅನಾವರಣಗೊಳಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವ್ಲಾದಿಮಿರ್ ಪುಟಿನ್ |PC : X \ @GlobeEyeNews
ಹೊಸದಿಲ್ಲಿ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕೃತವಾಗಿ ಬ್ರಿಕ್ಸ್ ಕರೆನ್ಸಿ ಬ್ಯಾಂಕ್ ನೋಟನ್ನು ಅನಾವರಣಗೊಳಿಸಿದ್ದು, ಇದನ್ನು ಡಾಲರ್ ಗೆ ಪರ್ಯಾಯವಾಗಿ ಬಳಸಲು ಪ್ರಸ್ತಾಪಿಸಲಾಗಿದೆ.
ಯುಎಸ್ ಡಾಲರ್ ನ್ನು ರಾಜಕೀಯ ಅಸ್ತ್ರವಾಗಿ ಬಳಸುವುದನ್ನು ತಡೆಯಲು ಪರ್ಯಾಯ ಅಂತರಾಷ್ಟ್ರೀಯ ಪಾವತಿ ವ್ಯವಸ್ಥೆ ರೂಪಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಶೃಂಗಸಭೆಯಲ್ಲಿ ಕರೆ ನೀಡಿದ್ದರು.
ರಷ್ಯಾದ ಕಜಾನ್ನಲ್ಲಿ ಬುಧವಾರ ನಡೆದ ಶೃಂಗಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಕರೆನ್ಸಿಗಳ ಆಧಾರದ ಮೇಲೆ ಸ್ವತಂತ್ರ ಪಾವತಿ ವ್ಯವಸ್ಥೆಯನ್ನು ರಚಿಸುವ ಜಂಟಿ ಘೋಷಣೆಯನ್ನು ಅಂಗೀಕರಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೃಂಗಸಭೆಯಲ್ಲಿ ಮಾತನಾಡುತ್ತಾ, ಡಾಲರ್ ನ್ನು ಅಸ್ತ್ರವಾಗಿ ಬಳಸವುದನ್ನು ನಾವು ನೋಡುತ್ತಿದ್ದೇವೆ, ಇದು ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ. ರಷ್ಯಾ ಮತ್ತು ಚೀನಾ ನಡುವಿನ ಸುಮಾರು 95% ವ್ಯಾಪಾರವು ಈಗ ರಷ್ಯಾದ ಕರೆನ್ಸಿ ರೂಬಲ್ಸ್ ಮತ್ತು ಚೀನಾದ ಯುವಾನ್ ಮೂಲಕವೇ ನಡೆಸಲ್ಪಡುತ್ತದೆ ಎಂದು ಹೇಳಿದ್ದಾರೆ.
ಇನ್ನು ವಿಶ್ವ ಆರ್ಥಿಕತೆಯನ್ನು ಡಾಲರ್ ನಿಂದ ಮುಕ್ತಗೊಳಿಸುವ ಕ್ರಮ ಬ್ರೆಝಿಲ್, ಭಾರತ ಸೇರಿದಂತೆ ಕೆಲ ಬ್ರಿಕ್ಸ್ ರಾಷ್ಟ್ರಗಳಿಗೆ ಸಮಾಧಾನ ತರಿಸಿಲ್ಲ ಎಂದು ಹೇಳಲಾಗಿದೆ.