ವ್ಯಾಗ್ನರ್ ಕಮಾಂಡರ್ ಜತೆ ರಶ್ಯ ಅಧ್ಯಕ್ಷ ಪುಟಿನ್ ಚರ್ಚೆ
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ Photo:PTI
ಮಾಸ್ಕೊ, ಸೆ.29: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವ್ಯಾಗ್ನರ್ ಹೋರಾಟಗಾರರ ಪಡೆಯ ಉನ್ನತ ಕಮಾಂಡರ್ ಆಂಡ್ರೆಯ್ ತ್ರೊಶೆವ್ರನ್ನು ಭೇಟಿಯಾಗಿ, ಉಕ್ರೇನ್ ಯುದ್ಧದಲ್ಲಿ ಖಾಸಗಿ ಹೋರಾಟಗಾರರ ಪಡೆ, ಬಾಡಿಗೆ ಸಿಪಾಯಿಗಳು ಹಾಗೂ ಸ್ವಯಂಸೇವಾ ತುಕಡಿಗಳನ್ನು ಸೂಕ್ತ ರೀತಿಯಲ್ಲಿ ಬಳಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ಸಭೆಯಲ್ಲಿ ರಶ್ಯದ ಸಹಾಯಕ ರಕ್ಷಣಾ ಸಚಿವ ಯೂನುಸ್-ಬೆಕ್ ಯೆಕುರೋವ್ ಕೂಡಾ ಪಾಲ್ಗೊಂಡಿದ್ದರು. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪಾಲ್ಗೊಂಡಿರುವ ಸ್ವಯಂಸೇವಕ ಹೋರಾಟಗಾರರ ತುಕಡಿಯ ಮೇಲ್ವಿಚಾರಣೆ ಹೊಣೆಯನ್ನು ತ್ರೊಶೆವ್ಗೆ ವಹಿಸಲಾಗಿದೆ. ಜೂನ್ನಲ್ಲಿ ವ್ಯಾಗ್ನರ್ ಕಮಾಂಡರ್ ಪ್ರಿಗೊಝಿನ್ ನೇತೃತ್ವದಲ್ಲಿ ನಡೆದ ದಂಗೆ ವಿಫಲಗೊಂಡ ಬಳಿಕ ರಶ್ಯವು ವ್ಯಾಗ್ನರ್ ಗುಂಪಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿರುವುದನ್ನು ಖಚಿತಪಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಗಸ್ಟ್ನಲ್ಲಿ ನಡೆದಿದ್ದ ವಿಮಾನ ಅಪಘಾತದಲ್ಲಿ ಪ್ರಿಗೊಝಿನ್ ಸೇರಿದಂತೆ ವ್ಯಾಗ್ನರ್ ನ ಹಿರಿಯ ಕಮಾಂಡರ್ಗಳು ಮೃತಪಟ್ಟಿದ್ದರು.