ಇಸ್ರೇಲ್ ಗಾಝಾದಲ್ಲಿ ನರಮೇಧ ನಡೆಸುತ್ತಿದೆ: ಸೌದಿ ಯುವರಾಜ
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: X/@BRICSinfo)
ಜಿದ್ದಾ: ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಗಾಝಾದಲ್ಲಿ ಇಸ್ರೇಲ್ನ ಕ್ರಮಗಳನ್ನು ನರಮೇಧ ಎಂದು ಖಂಡಿಸಿದ್ದಾರೆ. ಗಾಝಾ ಯುದ್ಧ ಆರಂಭವಾದ ಬಳಿಕ ಇದು ಸೌದಿಯ ಅಧಿಕಾರಿಯೋರ್ವರು ಇಸ್ರೇಲ್ ವಿರುದ್ಧ ಮಾಡಿರುವ ಅತ್ಯಂತ ಕಟುವಾದ ಸಾರ್ವಜನಿಕ ಟೀಕೆಯಾಗಿದೆ.
ಮುಸ್ಲಿಮ್ ಮತ್ತು ಅರಬ್ ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಅವರು ಲೆಬನಾನ್ ಮತ್ತು ಇರಾನ್ ಮೇಲೆ ಇಸ್ರೇಲಿ ದಾಳಿಗಳನ್ನೂ ಟೀಕಿಸಿದರು.
ಪ್ರತಿಸ್ಪರ್ಧಿಗಳಾಗಿರುವ ಸೌದಿ ಅರೇಬಿಯ ಮತ್ತು ಇರಾನ್ ನಡುವಿನ ಸಂಬಂಧಗಳು ಸುಧಾರಿಸುತ್ತಿವೆ ಎನ್ನುವುದಕ್ಕೆ ಸಂಕೇತವಾಗಿ ಅವರು, ಇರಾನ್ ನೆಲದ ಮೇಲೆ ದಾಳಿಗಳನ್ನು ಆರಂಭಿಸುವುದರ ವಿರುದ್ಧ ಇಸ್ರೇಲ್ಗೆ ಎಚ್ಚರಿಕೆ ನೀಡಿದರು.
ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಪಶ್ಚಿಮ ದಂಡೆ ಮತ್ತು ಗಾಝಾದಿಂದ ಇಸ್ರೇಲ್ನ ಸಂಪೂರ್ಣ ವಾಪಸಾತಿಗೆ ಕರೆ ನೀಡಿದರು.
ಈ ನಡುವೆ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಅವರು, ಗಾಝಾದಲ್ಲಿ ಯುದ್ಧ ನಿಲ್ಲದಿರುವುದು ಅಂತರರಾಷ್ಟ್ರೀಯ ಸಮುದಾಯದ ವೈಫಲ್ಯವಾಗಿದೆ ಎಂದರು. ಇಸ್ರೇಲ್ ಗಾಝಾದಲ್ಲಿ ಹಸಿವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಶೃಂಗಸಭೆಯಲ್ಲಿ ನಾಯಕರು ಗಾಝಾದಲ್ಲಿಯ ವಿಶ್ವಸಂಸ್ಥೆಯ ಸಿಬ್ಬಂದಿಗಳು ಮತ್ತು ಸೌಲಭ್ಯಗಳ ಮೇಲಿನ ಇಸ್ರೇಲ್ನ ನಿರಂತರ ದಾಳಿಗಳನ್ನೂ ಖಂಡಿಸಿದರು.