ಸೌದಿಯು ಫೆಲೆಸ್ತೀನಿ ಜನರೊಂದಿಗೆ ನಿಲ್ಲಲಿದೆ: ಸೌದಿ ಯುವರಾಜ
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Photo credit: saudigazette.com.sa)
ರಿಯಾದ್: ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ನಡೆಸಿರುವ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ತಮ್ಮ ದೇಶವು ಫೆಲೆಸ್ತೀನಿ ಜನರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ. ಅದೇ ಸಮಯ ಈ ಸಂಘರ್ಷ ಇನ್ನಷ್ಟು ವ್ಯಾಪಿಸದಂತೆ ತಾವು ಶ್ರಮಿಸುತ್ತಿರುವುದಾಗಿ ಅವರು ಫೆಲೆಸ್ತೀನಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಗೆ ಹೇಳಿದ್ದಾರೆ.
ಒಳ್ಳೆಯ ಜೀವನ ನಡೆಸುವ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹಾಗೂ ಶಾಂತಿಗಾಗಿ ಫೆಲೆಸ್ತೀನಿ ಜನರ ಕಾನೂನುಬದ್ಧ ಹಕ್ಕುಗಳಿಗಾಗಿ ಅವರ ಜೊತೆಗೆ ಸೌದಿ ಅರೇಬಿಯಾ ನಿಲ್ಲುವುದಾಗಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮಾತನಾಡಿದ ಮುಹಮ್ಮದ್ ಬಿನ್ ಸಲ್ಮಾನ್, ಫೆಲೆಸ್ತೀನಿ ವಿಚಾರವು ಸೌದಿ ಅರೇಬಿಯಾಗೆ ಬಹಳ ಮುಖ್ಯವಾಗಿದೆ ಎಂದಿದ್ದರು.
“ಆ ಸಮಸ್ಯೆ ಪರಿಹರಿಸಬೇಕಿದೆ, ಫೆಲೆಸ್ತೀನಿ ಜನರ ಜೀವನ ಸುಲಭಗೊಳಿಸಬೇಕಿದೆ,” ಎಂದು ಅವರು ಹೇಳಿದ್ದರು.