ರಷ್ಯದ ಸೇನೆಗೆ ಸೇರಿಸಲಾಗಿದ್ದ ಹಲವಾರು ಭಾರತೀಯರು ಈಗಲೂ ನಾಪತ್ತೆ: ವರದಿ
Photo Credit: Sushil Kumar Verma \ thehindu.com
ಹೊಸದಿಲ್ಲಿ: ರಷ್ಯದ ಸೇನೆಗೆ ಬಲವಂತದಿಂದ ಸೇರ್ಪಡೆಗೊಳಿಸಲಾಗಿದ್ದ ಹಲವಾರು ಭಾರತೀಯರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂವಹನ ಮತ್ತು ಕಾಣೆಯಾಗಿರುವ ಇಬ್ಬರು ವ್ಯಕ್ತಿಗಳ ಕುಟುಂಬ ಸದಸ್ಯರ ಹೇಳಿಕೆಗಳನ್ನು ಉಲ್ಲೇಖಿಸಿ The Hindu ವರದಿ ಮಾಡಿದೆ.
ಈ ಪೈಕಿ ಝಹೂರ್ ಶೇಖ್ (27) ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗಧಾರ್ ನಿವಾಸಿಯಾಗಿದ್ದು, ತನ್ನ ಮಗ ಡಿ.31ರಂದು ಕೊನೆಯ ಬಾರಿ ಕುಟುಂಬದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಎಂದು ಆತನ ತಂದೆ ಸಾರ್ವಜನಿಕ ಆರೋಗ್ಯ ಇಲಾಖೆಯ ನಿವೃತ್ತ ನಿರೀಕ್ಷಕ ಮುಹಮ್ಮದ್ ಅಮೀನ್ ಶೇಖ್ ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.
"ತಾನು ತರಬೇತಿಗೆ ತೆರಳುತ್ತಿದ್ದೇನೆ ಮತ್ತು ಮುಂದಿನ ಮೂರು ತಿಂಗಳು ದೂರವಾಣಿಯಲ್ಲಿ ಲಭ್ಯವಿರುವುದಿಲ್ಲ ಎಂದು ಝುಹೂರ್ ತಿಳಿಸಿದ್ದ. ಆದರೆ ಜನವರಿಯಲ್ಲಿ ರಷ್ಯದಲ್ಲಿ ಭಾರತೀಯರ ಸಾವಿನ ಕುರಿತು ಸುದ್ದಿಗಳು ನಮಗೆ ತಲುಪತೊಡಗಿದಾಗ ನಾವು ಚಿಂತೆಗೊಳಗಾಗಿದ್ದೆವು ಮತ್ತು ಆತನನ್ನು ದೂರವಾಣಿಯಲ್ಲಿ ಸಂಪರ್ಕಿಸಲು ನಡೆಸಿದ್ದ ಯತ್ನ ವಿಫಲಗೊಂಡಿತ್ತು. ನಾವು ಇನ್ನೂ ಆತನ ಕರೆಗಾಗಿ ಕಾಯುತ್ತಿದ್ದೇವೆ" ಎಂದು ಅವರು ಹೇಳಿದರು.
ಫೆ.24,2022ರಂದು ರಷ್ಯಾವು ಉಕ್ರೇನ್ ಆಕ್ರಮಣವನ್ನು ಆರಂಭಿಸಿತ್ತು. ಸುಮಾರು ಉದ್ಯೋಗ ಅರಸಿಕೊಂಡು ಬಂದಿದ್ದ ನೂರು ಭಾರತೀಯರನ್ನು ಯುದ್ಧದಲ್ಲಿ ಹೋರಾಡಲು ಬಲವಂತವಾಗಿ ರಷ್ಯದ ಸೇನೆಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ. ಅವರಲ್ಲಿ ಹಲವರು ಸ್ವದೇಶಕ್ಕೆ ಮರಳಲು ಸರಕಾರದ ನೆರವನ್ನು ಕೋರಿದ್ದರು.
ಜುಲೈವರೆಗೆ ಕನಿಷ್ಠ ಎಂಟು ಭಾರತೀಯರು ಸಂಘರ್ಷದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.
ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಝುಹೂರ್ ಕುರಿತು ಮಾಹಿತಿಗಳನ್ನು ಒದಗಿಸಲು ವಿಫಲಗೊಂಡ ಬಳಿಕ ಕಳೆದ ವಾರ ಮುಹಮ್ಮದ್ ಅಮೀನ್ ಶೇಖ್ ಮತ್ತು ಅವರ ಇಬ್ಬರು ಪುತ್ರರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಷ್ಯದ ರಾಯಭಾರ ಕಚೇರಿಯಿಂದ ಉತ್ತರಗಳನ್ನು ಕೋರಿ ದಿಲ್ಲಿಗೆ ಪ್ರಯಾಣಿಸಿದ್ದರು.
‘ನಾವು ರಷ್ಯದ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ವಿಷಯವನ್ನು ತಾವು ಪರಿಶೀಲಿಸುತ್ತಿರುವುದಾಗಿ ಅವರು ನಮಗೆ ತಿಳಿಸಿದ್ದಾರೆ. ಕನಿಷ್ಠ 15 ಭಾರತೀಯರು ಈಗಲೂ ನಾಪತ್ತೆಯಾಗಿದ್ದಾರೆ,ರಷ್ಯದ ಸರಕಾರವು ಸಹಕರಿಸುತ್ತಿದೆಯಾದರೂ, ಸೇನಾ ಕಮಾಂಡರ್ಗಳು ಸ್ಪಂದಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ ’ಎಂದು ಝುಹೂರ್ನ ಅಣ್ಣ ಐಜಾಜ್ ಅಮೀನ್ ಸುದ್ದಿಸಂಸ್ಥೆಗೆ ತಿಳಿಸಿದರು.
ಸೆಕ್ಯೂರಿಟಿ ಉದ್ಯೋಗದ ಬಗ್ಗೆ ಯುಟ್ಯೂಬ್ ವೀಡಿಯೊ ನೋಡಿದ ಬಳಿಕ ಝಹೂರ್ ರಷ್ಯಾಕ್ಕೆ ಪ್ರಯಾಣಿಸಿದ್ದ. ಆದರೆ ಅವನನ್ನು ಮೋಸದಿಂದ ರಷ್ಯದ ಸೇನೆಗೆ ಸೇರಿಸಲಾಗಿದೆ ಎಂದರು.
ಇದೇ ರೀತಿ ಪಂಜಾಬಿನ ಜಲಂಧರ್ ನಿವಾಸಿ ಮಂದೀಪ್(30) ಮಾರ್ಚ್ನಿಂದ ನಾಪತ್ತೆಯಾಗಿದ್ದಾನೆ. ‘ನಾವು ಕೊನೆಯ ಬಾರಿ ಮಾ.3ರಂದು ಆತನೊಂದಿಗೆ ಮತನಾಡಿದ್ದೆವು,ಆ ಬಳಿಕ ಆತನೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಮಂದೀಪ್ ಸೋದರ ಜಗದೀಪ ಕುಮಾರ ತಿಳಿಸಿದರು.
ರಷ್ಯದ ಸೇನೆಗೆ ಸೇರಿಸಲಾಗಿದ್ದ 85 ಭಾರತೀಯರು ಬಿಡುಗಡೆಗೊಂಡಿದ್ದು,ಇನ್ನೂ 20 ಭಾರತೀಯರು ಬಿಡುಗಡೆಗೊಳ್ಳಬೇಕಿದೆ. ಅವರ ಶೀಘ್ರ ಬಿಡುಗಡೆಗಾಗಿ ಸರಕಾರವು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರು ಅ.21ರಂದು ತಿಳಿಸಿದ್ದರು.