ಉಕ್ರೇನ್ ಗೆ ಇಯು ಸೇನೆ ಕಳುಹಿಸುವುದನ್ನು ತಳ್ಳಿಹಾಕಲಾಗದು: ಫ್ರಾನ್ಸ್
ಮಾನುವೆಲ್ ಮ್ಯಾಕ್ರೊನ್ | Photo: NDTV
ಪ್ಯಾರಿಸ್: ಉಕ್ರೇನ್ ಗೆ ಹೆಚ್ಚು ಶಸ್ತ್ರಾಸ್ತ್ರಗಳನ್ನು ತಕ್ಷಣ ಒದಗಿಸಲು ಯುರೋಪಿಯನ್ ಯೂನಿಯನ್(ಇಯು) ಹಾಗೂ ಅದರ ಮಿತ್ರರು ಒಪ್ಪಿದ್ದಾರೆ. ಆದರೆ ಉಕ್ರೇನ್ಗೆ ಯುರೋಪಿಯನ್ ಯೂನಿಯನ್ ನ ಸೇನೆ ಕಳುಹಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುವೆಲ್ ಮ್ಯಾಕ್ರೊನ್ ಹೇಳಿದ್ದಾರೆ.
ಉಕ್ರೇನ್ ವಿಷಯದಲ್ಲಿ ಯುರೋಪಿಯನ್ ಯೂನಿಯನ್ನ ದೃಢ ನಿಲುವಿನ ಬಗ್ಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಸಂದೇಶ ರವಾನಿಸುವ ಉದ್ದೇಶದಿಂದ ಯುರೋಪಿಯನ್ ಯೂನಿಯನ್ನ 20 ಮುಖಂಡರು ಸೋಮವಾರ ಪ್ಯಾರಿಸ್ನಲ್ಲಿ ಸಭೆ ಸೇರಿದ್ದರು. `ಉಕ್ರೇನ್ಗೆ ಪಡೆಗಳನ್ನು ಕಳುಹಿಸುವ ವಿಷಯದಲ್ಲಿ ಈ ಹಂತದಲ್ಲಿ ಒಮ್ಮತ ಮೂಡಿಲ್ಲ. ಆದರೆ ಯಾವುದನ್ನೂ ತಳ್ಳಿಹಾಕಲಾಗದು. ರಶ್ಯದ ಗೆಲುವನ್ನು ತಡೆಯಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ ಎಂದು ಮ್ಯಾಕ್ರೋನ್ ಹೇಳಿದರು. ಸಭೆಯಲ್ಲಿ ಮಾತನಾಡಿದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಫಿಕೊ ಉಕ್ರೇನ್ಗೆ ಮಿಲಿಟರಿ ನೆರವು ಒದಗಿಸುವುದನ್ನು ವಿರೋಧಿಸಿದರು. ` ಉಕ್ರೇನ್ಗೆ ತಮ್ಮದೇ ಸೈನ್ಯವನ್ನು ಕಳುಹಿಸಲು ಸಿದ್ಧವಾಗಿರುವ ದೇಶಗಳಿವೆ. ಕೆಲವು ದೇಶಗಳು ಇದನ್ನು ವಿರೋಧಿಸುತ್ತವೆ. ನಾವು ಎರಡನೇ ಗುಂಪಿಗೆ ಸೇರಿದ್ದೇವೆ. ಇನ್ನೂ ಕೆಲವು ದೇಶಗಳು ಈ ಪ್ರಸ್ತಾವದ ಬಗ್ಗೆ ಪರಿಶೀಲನೆ ಅಗತ್ಯ ಎನ್ನುತ್ತಿವೆ ಎಂದು ಫಿಕೋ ಹೇಳಿದ್ದಾರೆ.
ವೀಡಿಯೊ ಲಿಂಕ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ನಮ್ಮ ಇದುವರೆಗಿನ ಸಾಧನೆಯನ್ನು ಪುಟಿನ್ ನಾಶಗೊಳಿಸಲು ಬಿಡಬಾರದು ಮತ್ತು ರಶ್ಯದ ಆಕ್ರಮಣ ಇತರ ದೇಶಗಳಿಗೆ ವ್ಯಾಪಿಸುವುದನ್ನು ತಡೆಯಬೇಕು. ಉಕ್ರೇನ್ನಲ್ಲಿ ಹೋರಾಟ ನಡೆಸುವ ವಿಷಯದಲ್ಲಿ ಯುರೋಪ್ ಅಮೆರಿಕವನ್ನು ಅವಲಂಬಿಸದೆ ತನ್ನದೇ ಆದ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು ' ಎಂದು ಆಗ್ರಹಿಸಿದರು.
ಈ ಮಧ್ಯೆ, ಮೂರನೇ ದೇಶದಿಂದ ಶಸ್ತ್ರಾಸ್ತ್ರ ಖರೀದಿಸುವ ಝೆಕೋಸ್ಲಾವಾಕಿಯಾ ನೇತೃತ್ವದ ಉಪಕ್ರಮಕ್ಕೆ ಯುರೋಪಿಯನ್ ಯೂನಿಯನ್ನ 15 ದೇಶಗಳು ಸಹಿ ಹಾಕಿವೆ . ಫ್ರಾನ್ಸ್ನಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಮದ್ದುಗುಂಡುಗಳನ್ನು ಕ್ಷಿಪ್ರವಾಗಿ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಝೆಕೋಸ್ಲಾವಾಕಿಯಾ ಪ್ರಧಾನಿ ಪೀಟರ್ ಫಿಯಾಲಾ ಹೇಳಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಉಕ್ರೇನ್ಗೆ ದಶಲಕ್ಷ ಫಿರಂಗಿ ಗುಂಡುಗಳನ್ನು ಪೂರೈಸುವುದಾಗಿ ಯುರೋಪಿಯನ್ ಯೂನಿಯನ್ ಭರವಸೆ ನೀಡಿತ್ತು. ಆದರೆ ನಿಗದಿತ ಗಡುವಿನೊಳಗೆ ಪೂರೈಕೆ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.
ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್, ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರಾನ್, ಅಮೆರಿಕದ ಯುರೋಪಿಯನ್ ಮತ್ತು ಯುರೇಶಿಯನ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಜಿಮ್ ಒ'ಬ್ರಿಯಾನ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.