ಭಾರತಕ್ಕೆ ಬೆಂಬಲ ನೀಡಿದ ಮಾಲ್ದೀವ್ಸ್ ವಿರೋಧ ಪಕ್ಷಗಳು; ಅಧ್ಯಕ್ಷ ಮುಯಿಝು ವಿರುದ್ದ ಅವಿಶ್ವಾಸ ನಿರ್ಣಯದ ಎಚ್ಚರಿಕೆ
ಮುಹಮ್ಮದ್ ಮುಯಿಝು (Photo credit: bloomberg.com)
ಮಾಲೆ: ಮಾಲ್ದೀವ್ಸ್ ನ ನೂತನ ಅಧ್ಯಕ್ಷ ಮುಹಮ್ಮದ್ ಮುಯಿಝು ಮತ್ತು ಅವರ ಸರಕಾರ ಭಾರತ-ಮಾಲ್ದೀವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹದಗೆಡಿಸುತ್ತಿದ್ದಾರೆ ಎಂದು ಹಲವು ವಿರೋಧ ಪಕ್ಷದ ಮುಖಂಡರು ಆರೋಪಿಸಿದ್ದು ಅಧ್ಯಕ್ಷರು ಮತ್ತು ಅವರ ಸರಕಾರ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಭಾರತೀಯರನ್ನು ಗುರಿಯಾಗಿಸಿಕೊಂಡು ಜನಾಂಗೀಯ ಅವಹೇಳನಕಾರಿ ಹೇಳಿಕೆ ನೀಡಿರುವ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿರುವ ಮುಯಿಝು ಮತ್ತವರ ಸಚಿವರು ರಾಜೀನಾಮೆ ನೀಡಬೇಕು ಎಂದು ಸಂಸದ ಅಝೀಮ್ ಆಲಿ ಆಗ್ರಹಿಸಿದ್ದಾರೆ. ನೂತನವಾಗಿ ಆಯ್ಕೆಗೊಂಡಿರುವ ಸರಕಾರವನ್ನು ಪದಚ್ಯುತಗೊಳಿಸಲು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂದವರು ವಿರೋಧ ಪಕ್ಷಗಳನ್ನು ಒತ್ತಾಯಿಸಿದ್ದಾರೆ. ನಾವು ದೇಶದ ವಿದೇಶಾಂಗ ನೀತಿಯನ್ನು ಸ್ಥಿರವಾಗಿ ಮುಂದುವರಿಸಿಕೊಂಡು ಹೋಗಲು ಮತ್ತು ಯಾವುದೇ ನೆರೆಯ ದೇಶವನ್ನು ಏಕಾಂಗಿಯಾಗಿಸುವ ಪ್ರಯತ್ನವನ್ನು ವಿರೋಧಿಸುತ್ತೇವೆ. ಮಾಲ್ದೀವ್ಸ್ ಡೆಮೊಕ್ರಟಿಕ್ ಪಾರ್ಟಿ(ಎಂಡಿಪಿ) ಅಧ್ಯಕ್ಷ ಮುಯಿಝು ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುತ್ತದೆಯೇ ? ಎಂದವರು ಪ್ರಶ್ನಿಸಿದ್ದಾರೆ.
ಸಚಿವರು ಜನಾಂಗೀಯ ನಿಂದನೆ ಹೇಳಿಕೆ ನೀಡಿರುವುದರಿಂದ ಸರಕಾರ ಭಾರತದ ಜನತೆಯಿಂದ ಅಧಿಕೃತವಾಗಿ ಕ್ಷಮೆ ಯಾಚಿಸುವ ಅಗತ್ಯವಿದೆ. ಸಚಿವರ ಹೇಳಿಕೆ ಮಾಲ್ದೀವ್ಸ್ ಜನತೆಯ ಹೇಳಿಕೆಯಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ನಾವು ಭಾರತವನ್ನು ಎಷ್ಟೊಂದು ಅವಲಂಬಿಸಿದ್ದೇವೆ ಎಂಬುದನ್ನು ಮರೆಯಬಾರದು. ನಾವು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಮೊದಲು ನೆರವಿಗೆ ಬಂದದ್ದು ಭಾರತ ಎಂದು ಮಾಜಿ ಸಹ ಸ್ಪೀಕರ್ ಇವಾ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
ಭಾರತ ಯಾವತ್ತೂ ಮಾಲ್ದೀವ್ಸ್ ಗೆ ಉತ್ತಮ ಸ್ನೇಹಿತನಾಗಿದೆ. ಸಚಿವರ ಬೇಜವಾಬ್ದಾರಿಯುತ ಹೇಳಿಕೆಗಳು ಉಭಯ ದೇಶಗಳ ನಡುವಿನ ದೀರ್ಘಾವಧಿಯ ಸ್ನೇಹ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲು ಅವಕಾಶ ನೀಡಬಾರದು ಎಂದು ಮಾಜಿ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಹೇಳಿದ್ದಾರೆ. ಮಾಲ್ದೀವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅವರೂ ಭಾರತದ ವಿರುದ್ಧದ ಹೇಳಿಕೆಯನ್ನು ಖಂಡಿಸಿರುವುದಾಗಿ ಎಎನ್ಐ ಸುದ್ಧಿಸಂಸ್ಥೆ ವರದಿ ಮಾಡಿದೆ.
ಭಾರತ ಭೇಟಿಗೆ ಅಧ್ಯಕ್ಷ ಮುಯಿಝು ನಿರ್ಧಾರ?
ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ಹಾಗೂ ಪರಸ್ಪರ ಹಿತಾಸಕ್ತಿಗೆ ಪೂರಕವಾಗಿರುವ ಯೋಜನೆಗಳ ಬಗ್ಗೆ ಚರ್ಚಿಸಲು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಶೀಘ್ರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮಾಲ್ದೀವ್ಸ್ ಸರಕಾರದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಸಿಒಪಿ ಶೃಂಗಸಭೆಯ ಸಂದರ್ಭ ಅಧ್ಯಕ್ಷ ಮುಹಮ್ಮದ್ ಮುಯಿಝು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಮಾತುಕತೆಯಲ್ಲಿ ಮುಯಿಝು ಭಾರತಕ್ಕೆ ಭೇಟಿ ನೀಡಲು ಆಮಂತ್ರಿಸಲಾಗಿದೆ. ಶೀಘ್ರವೇ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿ ಹೇಳಿದೆ. ಮುಹಮ್ಮದ್ ಮುಯಿಝು ಈಗ ಚೀನಾಕ್ಕೆ ಭೇಟಿ ನೀಡಿದ್ದಾರೆ.