ಚೀನಾದಲ್ಲಿ ತೀವ್ರ ಶೀತ ಅಲೆ: ಮುನ್ನೆಚ್ಚರಿಕೆ ವಹಿಸಲು ಸೂಚನೆ
Photo: PTI
ಬೀಜಿಂಗ್: ದಕ್ಷಿಣ ಚೀನಾದ್ಯಂತ ತಾಪಮಾನವು ಕುಸಿದಿದ್ದರಿಂದ ಮತ್ತು ರಾಜಧಾನಿ ಬೀಜಿಂಗ್ನಲ್ಲಿ ಹಿಮಮಂಜು ಕವಿದ ಕಾರಣ ಚೀನಾದಲ್ಲಿ ತೀವ್ರ ಹವಾಮಾನ ವೈಪರೀತ್ಯದ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಚೀನಾದಲ್ಲಿ ಶುಕ್ರವಾರ ಸರಾಸರಿ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ನಷ್ಟು ಕೆಳಗಿಳಿಯುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ಇತರ ಕೆಲವು ಪ್ರದೇಶಗಳಲ್ಲಿ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗೆ ಇಳಿಯಬಹುದು ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್ಎಮ್ಸಿ) ಹೇಳಿದೆ.
ಶೀತ ಹವೆ ಮುಂದುವರಿಯಲಿದ್ದು ಎಲ್ಲಾ ಸ್ಥಳೀಯಾಡಳಿತಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸಾರ್ವಜನಿಕರು ಬೆಳೆ ಮತ್ತು ಜಲಚರ ಉತ್ಪನ್ನಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಬೀಜಿಂಗ್ನಲ್ಲಿ ಬುಧವಾರ ಬೆಳಿಗ್ಗೆ ದಟ್ಟವಾದ ಮಂಜು ಕವಿದ ಕಾರಣ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮೊಟಕುಗೊಂಡಿದೆ. ರಾಜಧಾನಿಯ ನೆರೆಯ ಪ್ರದೇಶಗಳಲ್ಲಿ 1.6 ಇಂಚಿನಷ್ಟು ಮಂಜು ಸುರಿದಿದ್ದು ಬಹುತೇಕ ರಸ್ತೆಗಳು ಮಂಜಿನಿಂದ ಮುಚ್ಚಿಹೋಗಿತ್ತು ಎಂದು ವರದಿಯಾಗಿದೆ.