ಮಲೇಶ್ಯಾದಲ್ಲಿ ಭೀಕರ ಪ್ರವಾಹ | 4 ಮಂದಿ ಮೃತ್ಯು ; 80,000 ಮಂದಿ ಸ್ಥಳಾಂತರ
ಸಾಂದರ್ಭಿಕ ಚಿತ್ರ | PTI
ಕೌಲಲಾಂಪುರ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೇಶ್ಯಾದ ಹಲವು ರಾಜ್ಯಗಳಲ್ಲಿ ಪ್ರವಾಹದ ಸಮಸ್ಯೆ ಉಂಟಾಗಿದ್ದು 4 ಮಂದಿ ಸಾವನ್ನಪ್ಪಿದ್ದು 80,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಈಶಾನ್ಯದ ಕೆಲಾಂಟನ್ ರಾಜ್ಯ ಮತ್ತು ನೆರೆಯ ಟೆರೆಂಗಾನು ರಾಜ್ಯದಲ್ಲಿ ಹೆಚ್ಚು ಹಾನಿ ಸಂಭವಿಸಿದೆ. 7 ರಾಜ್ಯಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಆಶ್ರಯ ಶಿಬಿರಗಳಿಗೆ 80,589 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಪೀಡಿತ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಶೋಧ ಮತ್ತು ರಕ್ಷಣಾ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ. ಶನಿವಾರದವರೆಗೆ ಭಾರೀ ಮಳೆ ಮುಂದುವರಿಯಲಿದೆ. ತಗ್ಗು ಪ್ರದೇಶಗಳಲ್ಲಿ ಸಾವಿರಾರು ತುರ್ತು ಸೇವಾ ಸಿಬ್ಬಂದಿಗಳನ್ನು ಈಗಾಗಲೇ ನಿಯೋಜಿಸಲಾಗಿದ್ದು ದೋಣಿಗಳು, ಆಂಬ್ಯುಲೆನ್ಸ್ ಹಾಗೂ ಹೆಲಿಕಾಪ್ಟರ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.