ಎರಡನೇ ಬಾರಿಗೆ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಶಾರ್ದುಲ್ ಠಾಕೂರ್

(Shardul Thakur/Instagram)
ಲಂಡನ್ : ಟೀಮ್ ಇಂಡಿಯಾದ ಆಲ್ರೌಂಡರ್ ಶಾರ್ದುಲ್ ಠಾಕೂರ್ ಬುಧವಾರ ಇಂಗ್ಲೆಂಡ್ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಇನ್ನು ಕನಿಷ್ಠ ಮೂರು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿಯುವರೆಂದು ನಿರೀಕ್ಷಿಸಲಾಗಿದೆ.
32 ವರ್ಷದ ಕ್ರಿಕೆಟಿಗ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯ ಬೆಡ್ನಲ್ಲಿ ಕುಳಿತಿರುವ ಚಿತ್ರವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದಾರೆ. ಅದಕ್ಕೆ “ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು’’ ಎಂಬ ಅಡಿಬರಹವನ್ನು ಕೊಟ್ಟಿದ್ದಾರೆ.
ಇದು ಅವರ ಎರಡನೇ ಪಾದ ಶಸ್ತ್ರಚಿಕಿತ್ಸೆಯಾಗಿದೆ. ಅವರು ಐದು ವರ್ಷಗಳ ಹಿಂದೆ, 2019ರಲ್ಲೂ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿದ್ದಾಗ ಪಾದ ನೋವು ಮರುಕಳಿಸಿತ್ತು. ಬಳಿಕ ಅವರು ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಆಡಿದ್ದಾರೆ. ಆ ಮೂಲಕ ಮುಂಬೈ ತಂಡವು 42ನೇ ಪ್ರಶಸ್ತಿ ಎತ್ತಲು ನೆರವು ನೀಡಿದ್ದಾರೆ. ಆದರೆ, ಗಾಯದಿಂದ ಚೇತರಿಸಿಕೊಳ್ಳಲು ಪಂದ್ಯಗಳ ನಡುವೆ ಹೆಚ್ಚಿನ ಕಾಲಾವಕಾಶ ನೀಡುವಂತೆ ಅವರು ಬಿಸಿಸಿಐಯನ್ನು ಕೋರಿದ್ದರು.
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಒಂಭತ್ತು ಪಂದ್ಯಗಳಿಂದ ಕೇವಲ ಐದು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಠಾಕೂರ್ ಬಿಸಿಸಿಐಯ ಗ್ರೇಡ್ ಸಿ ವಾರ್ಷಿಕ ಆಟಗಾರರ ಗುತ್ತಿಗೆ ಹೊಂದಿರುವುದರಿಂದ ಅವರ ಚಿಕಿತ್ಸೆಯ ವೆಚ್ಚವನ್ನು ಬಿಸಿಸಿಐ ಭರಿಸುತ್ತದೆ.
ಭಾರತದ ಮುಂದಿನ ದೇಶಿ ಕ್ರಿಕೆಟ್ ಋತು ಆರಂಭವಾಗುವ ವೇಳೆಗೆ ಅವರು ಆಡಲು ಸಮರ್ಥರಾಗಬಹುದು ಎಂದು ನಿರೀಕ್ಷಿಸಲಾಗಿದೆ.