ಬಾಂಗ್ಲಾ ವಿಭಜಿಸಿ ಕ್ರಿಶ್ಚಿಯನ್ ರಾಷ್ಟ್ರ ರಚಿಸಲು ಷಡ್ಯಂತ್ರ : ಪ್ರಧಾನಿ ಶೇಖ್ ಹಸೀನಾ ಆರೋಪ
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ | PC : ANI
ಢಾಕ : ಈಸ್ಟ್ ತಿಮೋರ್ನ ರೀತಿಯಲ್ಲೇ ಬಾಂಗ್ಲಾದೇಶದ ಛತ್ತೋಗ್ರಾಮ್ ಮತ್ತು ಮ್ಯಾನ್ಮಾರ್ನ ಭಾಗವನ್ನು ಸೇರಿಸಿ ಕ್ರಿಶ್ಚಿಯನ್ ದೇಶವೊಂದನ್ನು ರಚಿಸುವ ಷಡ್ಯಂತ್ರ ನಡೆದಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ವಿದೇಶಿ ರಾಷ್ಟ್ರವೊಂದರ ವಾಯುನೆಲೆಯನ್ನು ಸ್ಥಾಪಿಸಲು ಅನುಮತಿ ನೀಡಿದರೆ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಸುಲಭವಾಗಿ ಮರು ಆಯ್ಕೆಗೊಳ್ಳುವ ಆಮಿಷವನ್ನು ತಮಗೆ ಒಡ್ಡಲಾಗಿತ್ತು. ʼಬಿಳಿ ವ್ಯಕ್ತಿʼಯೊಬ್ಬ ಈ ಆಫರ್ ನೀಡಿದ್ದ ಎಂದವರು ವಿದೇಶಿ ರಾಷ್ಟ್ರದ ಹೆಸರೆತ್ತದೆ ಹೇಳಿದ್ದಾರೆ.
ಈಸ್ಟ್ ತಿಮೋರ್ನ ರೀತಿ ಅವರು ಬಾಂಗ್ಲಾ ಮತ್ತು ಮ್ಯಾನ್ಮಾರ್ನ ಪ್ರದೇಶವನ್ನು ಸೇರಿಸಿ, ಬಂಗಾಳ ಕೊಲ್ಲಿಯಲ್ಲಿ ವಾಯುನೆಲೆ ಹೊಂದಿರುವ ಕ್ರಿಶ್ಚಿಯನ್ ರಾಷ್ಟ್ರವೊಂದನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆ. ಇಂತಹ ಪಿತೂರಿಯನ್ನು ಎದುರಿಸಲು ಮತ್ತು ಪ್ರಾದೇಶಿಕ ಸ್ಥಿರತೆಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ತಡೆಯಲು ನಾನು ದೃಢ ನಿರ್ಧಾರ ಮಾಡಿದ್ದೇನೆ. ಅವರು ಒಂದು ದೇಶವನ್ನು ಮಾತ್ರ ಗುರಿಯಾಗಿಸಿಲ್ಲ. ಅವರ ಉದ್ದೇಶವೇನೆಂಬುದು ತನಗೆ ತಿಳಿದಿದೆ. ಅವರ ಕೊಡುಗೆಯನ್ನು ತಿರಸ್ಕರಿಸಿರುವುದರಿಂದ ತನಗೆ ಸಮಸ್ಯೆ ಎದುರಾಗಬಹುದು. ಆದರೆ ಅದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹಸೀನಾ ಹೇಳಿದ್ದಾರೆ.
ದೇಶದ ದಕ್ಷಿಣದ ತುದಿಯಲ್ಲಿರುವ ಸಣ್ಣದ್ವೀಪ ಮಾರ್ಟಿನ್ಸ್ ದ್ವೀಪದ ಮೇಲೆ ಅಮೆರಿಕ ಕಣ್ಣುಹಾಕಿದೆ ಎಂದು ಬಾಂಗ್ಲಾದ ರಾಜಕೀಯ ಮುಖಂಡರು ಪ್ರತಿಪಾದಿಸಿದ್ದಾರೆ. ಆದರೆ 2023ರಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಈ ವರದಿಯನ್ನು ನಿರಾಕರಿಸಿದ್ದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.