ಸೊಮಾಲಿಯಾ ಸೇನಾನೆಲೆಯ ಮೇಲೆ ಗುಂಡಿನ ದಾಳಿ; 5 ಯೋಧರ ಸಾವು
ಸಾಂದರ್ಭಿಕ ಚಿತ್ರ | Photo:NDTV
ಮೊಗದಿಶು : ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿನ ಸೇನಾನೆಲೆಯ ಮೇಲೆ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯುಎಇ ಯೋಧ ಹಾಗೂ 4 ಸೊಮಾಲಿಯಾ ಯೋಧರು ಸಾವನ್ನಪ್ಪಿರುವುದಾಗಿ ಸೇನಾಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ತರಬೇತಿ ಪಡೆದು ಸೇನಾಪಡೆಗೆ ನೇಮಕಗೊಂಡಿದ್ದ ಸೊಮಾಲಿಯಾದ ಯೋಧ ಯುಎಇ ನಿರ್ವಹಿಸುವ ಗಾರ್ಡನ್ ಸೇನಾನೆಲೆಯ ಮೇಲೆ ಗುಂಡು ಹಾರಿಸಿದ್ದು ಭದ್ರತಾ ಪಡೆಯ ಪ್ರತಿದಾಳಿಯಲ್ಲಿ ಆತನನ್ನೂ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಸೊಮಾಲಿಯಾದ ಸಶಸ್ತ್ರ ಪಡೆಗೆ ತರಬೇತಿ ನೀಡುತ್ತಿದ್ದಾಗ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ಮೂವರು ಯೋಧರು ಹಾಗೂ ಬಹ್ರೇನ್ನ ಓರ್ವ ಯೋಧ ಸಾವನ್ನಪ್ಪಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ಹೇಳಿದೆ. ದಾಳಿಯ ಬಗ್ಗೆ ಯುಎಇ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕೃತ್ಯದ ಬಗ್ಗೆ ತನಿಖೆ ನಡೆಸಲು ಸೊಮಾಲಿಯಾ ಸರಕಾರಕ್ಕೆ ಸಹಕಾರ ಮತ್ತು ಸಮನ್ವಯವನ್ನು ಮುಂದುವರಿಸಲಾಗುವುದು ಎಂದು ಹೇಳಿದೆ.
ಗಾರ್ಡನ್ ಸೇನಾನೆಲೆಯಲ್ಲಿ ಯುಎಇ ತರಬೇತುದಾರರು ಮತ್ತು ಸೊಮಾಲಿಯಾದ ಮಿಲಿಟರಿ ಅಧಿಕಾರಿಗಳ ಮೇಲೆ ಹೊಸದಾಗಿ ತರಬೇತಿ ಪಡೆದ ಯೋಧ ದಾಳಿ ನಡೆಸಿದ್ದು, ಈತ ಅಲ್ ಶಬಾಬ್ ಸಶಸ್ತ್ರ ಹೋರಾಟಗಾರರ ಗುಂಪಿನಿಂದ ನಿಷ್ಟೆ ಬದಲಿಸಿ ಸೊಮಾಲಿಯಾ ಸೇನಾಪಡೆಯ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಅಲ್ಖೈದಾ ಜತೆ ನಂಟು ಹೊಂದಿರುವ ಅಲ್ಶಬಾಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. `ನಮ್ಮ ಹೋರಾಟಗಾರರು 17 ಯೋಧರನ್ನು ಹತ್ಯೆ ಮಾಡಿದ್ದಾರೆ. ಜತೆಗೆ ಸುಮಾರು 10 ಯೋಧರು ಗಾಯಗೊಂಡಿದ್ದಾರೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.