ಸುನಾಕ್ ಗೆ ಆಘಾತ: ಸಾರ್ವತ್ರಿಕ ಚುನಾವಣೆಗೆ ಮುನ್ನ 78 ಸಂಸದರ ಸಾಮೂಹಿಕ ರಾಜೀನಾಮೆ
PC: PTI
ಲಂಡನ್: ಬ್ರಿಟನ್ ನ ಸಾರ್ವತ್ರಿಕ ಚುನಾವಣೆಯನ್ನು ಜುಲೈ 4ರಂದು ನಡೆಸುವ ನಿರ್ಧಾರವನ್ನು ಪ್ರಧಾನಿ ರಿಷಿ ಸುನಾಕ್ ಪ್ರಕಟಿಸಿದ ಬೆನ್ನಲ್ಲೇ, ಸ್ವಪಕ್ಷೀಯರಿಂದಲೇ ಭಾರಿ ಆಘಾತ ಎದುರಿಸಿದ್ದಾರೆ. ಮೊದಲ ವಾರಾಂತ್ಯ ಪ್ರಚಾರದಿಂದ ಒಂದು ದಿನ ದೂರ ಉಳಿಯಲು ನಿರ್ಧರಿಸಿ, ತಮ್ಮ ಆಪ್ತ ಸಹೆಗಾರರ ಜತೆ ಸುನಾಕ್ ವಾರಾಂತ್ಯ ಕಳೆದಿದ್ದಾರೆ. ತಮ್ಮ ಆಪ್ತರು ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಹಾರಕ್ಕೆ ತೆರಳಿರುವ 44 ವರ್ಷದ ಸುನಾಕ್ಗೆ ಕನ್ಸರ್ವೇಟಿವ್ ಪಾರ್ಟಿಯ 78 ಸಂಸದರ ಸಾಮೂಹಿಕ ನಿರ್ಗಮನ ನಿದ್ದೆಗೆಡಿಸಿದೆ.
ಮುಂಚೂಣಿ ಟೋರಿ ಮುಖಂಡರು ಹಾಗೂ ಸಂಪುಟ ಸಹೋದ್ಯೋಗಿಗಳಾದ ಮೈಕೆಲ್ ಗೋವ್ ಮತ್ತು ಆ್ಯಂಡ್ರಿಯಾ ಲೀಡ್ಸಮ್ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದು, ಪಕ್ಷದ ಸದಸ್ಯತ್ವ ತೊರೆದ ಸಂಸದರ ಸಂಖ್ಯೆ 78ಕ್ಕೇರಿದೆ.
ಗೋವ್ ತಮ್ಮ ರಾಜೀನಾಮೆ ಪತ್ರವನ್ನು ಶುಕ್ರವಾರ ಸಂಜೆ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ದೇಶಾದ್ಯಂತ ಪ್ರಸ್ತುತ ಇರುವ ಟೋರಿಗಳಿಗೆ ಪ್ರಬಲ ಸವಾಲು ಎದುರಾಗಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಸುನಾಕ್ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಲೀಡ್ಸಮ್ ಕೂಡಾ ಸುನಾಕ್ ಅವರಿಗೆ ಬರೆದ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುನಾಕ್ ವಾರಾಂತ್ಯದಲ್ಲಿ ವಿಹಾರಕ್ಕೆ ತೆರಳುವ ಬದಲು ಚುನಾವಣಾ ಕಾರ್ಯತಂತ್ರದ ಬಗ್ಗೆ ತಮ್ಮ ಆಪ್ತ ಸಲಹೆಗಾರರ ಜತೆಗೆ ಚರ್ಚಿಸಬೇಕಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಗಾರ್ಡಿಯನ್ ವರದಿ ಮಾಡಿದೆ.