ಶೂಟಿಂಗ್, ದೊಂಬಿ ಪ್ರಕರಣ: ಕೆನಡಾದಲ್ಲಿ ಬಿಷ್ಣೋಯಿ ಗ್ಯಾಂಗ್ ಸದಸ್ಯ ಬಂಧನ
ಲಾರೆನ್ಸ್ ಬಿಷ್ಣೋಯಿ | ಎ.ಪಿ.ಧಿಲ್ಲಾನ್ PTI
ಹೊಸದಿಲ್ಲಿ: ಕೆನಡಾದ ವಿಕ್ಟೋರಿಯಾ ದ್ವೀಪದಲ್ಲಿ ಖ್ಯಾತ ಪಂಜಾಬಿ ಗಾಯಕ ಎ.ಪಿ.ಧಿಲ್ಲಾನ್ ಅವರ ಮನೆಯಲ್ಲಿ ನಡೆದ ಶೂಟಿಂಗ್ ಘಟನೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಸದಸ್ಯನೊಬ್ಬನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಮನಿಟೋಬಾದ ವಿನ್ನಿಪೆಗ್ ನ ಅಭಿಜಿತ್ ಕಿಂಗ್ರಾ ಬಂಧನಕ್ಕೆ ಒಳಗಾದ ಯುವಕ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯ ಬಳಿಕ ಭಾರತಕ್ಕೆ ಪಲಾಯನ ಮಾಡಿದ್ದಾನೆ ಎಂದು ನಂಬಲಾದ ವಿಕ್ರಮ್ ಶರ್ಮಾ (23) ಎಂಬಾತನ ವಿರುದ್ಧವೂ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಶರ್ಮಾ ಚಿತ್ರ ತಮ್ಮ ಬಳಿ ಇಲ್ಲ. ಆದರೆ ಆತನ ಬಗೆಗಿನ ವಿವರಣೆಯನ್ನು ಬಿಡುಗಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
"ವಿಕ್ರಂ ಶರ್ಮಾ ದಕ್ಷಿಣ ಏಷ್ಯಾದ ವ್ಯಕ್ತಿಯಾಗಿದ್ದು 5.9 ಅಡಿ ಎತ್ತರ ಇದ್ದಾನೆ. ಸುಮಾರು 90 ಕೆಜಿ ತೂಕ ಹೊಂದಿದ್ದಾನೆ. ಕಪ್ಪು ಕೂದಲು ಹಾಗೂ ಕಂದು ಕಣ್ಣು ಹೊಂದಿದ್ದಾನೆ" ಎಂದು ಪೊಲೀಸರು ವಿವರಿಸಿದ್ದಾರೆ.
ಸೆಪ್ಟೆಂಬರ್ 1ರಂದು ರಾತ್ರಿ ಈ ದಾಳಿ ಘಟನೆ ನಡೆದಿದ್ದು, ದಿಲ್ಲಾನ್ ನಿವಾಸದ ಬಳಿ ಹಲವು ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು ಹಾಗೂ ದಿಲ್ಲಾನ್ಗೆ ಸೇರಿದ ಎರಡು ವಾಹನಗಳನ್ನು ಬೆಂಕಿ ಹಚಚಿ ಸುಟ್ಟುಹಾಕಲಾಗಿತ್ತು. ಸ್ವಯಂಚಾಲಿತ ಪಿಸ್ತೂಲ್ ನಿಂದ ರಾತ್ರಿಯ ವೇಳೆ ಮನೆ ಹೊರಗೆ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿರುವ ದೃಶ್ಯಾವಳಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಸಲ್ಮಾನ್ ಖಾನ್ ಜೊತೆ ನಟಿಸಿರುವ ಧಿಲ್ಲಾನ್ ಅವರ ಇತ್ತೀಚಿನ ವಿಡಿಯೊ "ಓಲ್ಡ್ ಮನಿ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿತ್ತು. ಬಿಷ್ಣೋಯಿ ಗ್ಯಾಂಗ್ ನ ರೋಹಿತ್ ಗೋದ್ರಾ ಎಂಬಾತ ಈ ದಾಳಿಯ ಹೊಣೆ ಹೊತ್ತಿದ್ದ ಹಾಗೂ ಸಲ್ಮಾನ್ ಖಾನ್ ಜತೆಗೆ ಯಾವುದೇ ಒಪ್ಪಂದಗಳಿಗೆ ಸಹಿ ಮಾಡದಂತೆ ಧಿಲ್ಲಾನ್ ಗೆ ಎಚ್ಚರಿಕೆ ನೀಡಿದ್ದ.