“ನಾನು ಕೊನೆಯ ಮಾತುಗಳನ್ನು ಹೇಳಲೆ?”
ದಕ್ಷಿಣ ಕೊರಿಯಾ ವಿಮಾನ ಪತನವಾಗುವುದಕ್ಕೂ ಮುನ್ನ ತನ್ನ ಕುಟುಂಬದ ಸದಸ್ಯರಿಗೆ ಸಂದೇಶ ರವಾನಿಸಿದ್ದ ಪ್ರಯಾಣಿಕ
PC : NDTV
ಸಿಯೋಲ್: ರವಿವಾರ ದಕ್ಷಿಣ ಕೊರಿಯಾದಲ್ಲಿ ನೀರವ ಮೌನ ಮನೆ ಮಾಡಿತ್ತು. ರವಿವಾರ ಬೆಳಗ್ಗೆ 181 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನವಾಗಿ ಸ್ಫೋಟಗೊಂಡಿದ್ದರಿಂದ ಕನಿಷ್ಠ 179 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ದಕ್ಷಿಣ ಕೊರಿಯಾದ್ಯಂತ ಗಾಢ ವಿಷಾದ ಮನೆ ಮಾಡಿದೆ.
ಪ್ರಯಾಣಿಕರ ಸಂತೈಸಲಾಗದ ಕುಟುಂಬಗಳು ಹಾಗೂ ಸ್ನೇಹಿತರು ಘಟನೆ ನಡೆದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಿಕ್ಕಿರಿದು ನೆರೆದಿದ್ದಾರೆ. ಈ ಪೈಕಿ ಒಂದು ಕುಟುಂಬವು, ವಿಮಾನ ಪತನವಾಗುವುದಕ್ಕೂ ಕೆಲವೇ ನಿಮಿಷಗಳ ಮುನ್ನ, ಹಕ್ಕಿಯೊಂದು ವಿಮಾನದ ರೆಕ್ಕೆಗೆ ಬಡಿದಿದೆ ಎಂದು ವ್ಯಕ್ತಿಯೊಬ್ಬರು ನುಡಿ ಸಂದೇಶ ರವಾನಿಸಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಅವರ ಮೊಬೈಲ್ ಫೋನ್ ಗೆ ಮತ್ತೊಂದು ಸಂದೇಶವೂ ಬಂದಿದ್ದು, “ನಾನು ನನ್ನ ಕೊನೆಯ ಮಾತುಗಳನ್ನು ಹೇಳಲೆ?” ಎಂದು ಆ ಸಂದೇಶದಲ್ಲಿ ಕೇಳಲಾಗಿದೆ.
ಘಟನೆ ಸಂದರ್ಭದಲ್ಲಿ ಹಲವಾರು ಸ್ಥಳೀಯರು ವಿಮಾನದ ಎಂಜಿನ್ ನಲ್ಲಿ ಬೆಂಕಿ ಹೊತ್ತುಕೊಂಡಿರುವುದನ್ನು ಕಂಡಿದ್ದು, ನಂತರ ಹಲವು ಬಾರಿ ಸ್ಫೋಟಗೊಂಡ ಸದ್ದನ್ನು ಕೇಳಿದ್ದಾರೆ ಎಂದು ದಕ್ಷಿಣ ಕೊರಿಯಾದ ಯೋನ್ಹ್ಯಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನಾನು ವಿಮಾನವು ಕೆಳಗಿಳಿಯುತ್ತಿರುವುದನ್ನು ಕಂಡೆ ಹಾಗೂ ಮಿನುಗುವ ದೀಪವನ್ನು ಕಂಡಾಗ ಅದಿನ್ನೇನು ಭೂಸ್ಪರ್ಶ ಮಾಡಬಹುದು ಎಂದು ನಾನು ಭಾವಿಸಿದ್ದೆ. ನಂತರ, ಆಕಾಶದಲ್ಲಿ ದೊಡ್ಡ ಸದ್ದಿನೊಂದಿಗೆ ಹೊಗೆ ಹರಡಿಕೊಂಡಿತು ಹಾಗೂ ಸರಣಿ ಸ್ಫೋಟದ ಸದ್ದುಗಳನ್ನು ನಾನು ಕೇಳಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಬೋಯಿಂಗ್ 737-800 ವಿಮಾನವಾದ ಜೆಜು ಏರ್ ಪ್ಲೇನ್ ಬ್ಯಾಂಕಾಕ್ ನಿಂದ ಮುವಾನ್ ಗೆ ಆಗಮಿಸುತ್ತಿತ್ತು. ಅದು ಬೆಳಗ್ಗೆ 9 ಗಂಟೆಯ ಕೆಲವೇ ಹೊತ್ತಿನಲ್ಲಿ ಭೂಸ್ಪರ್ಶ ಮಾಡಲು ಪ್ರಯತ್ನಿಸಿತಾದರೂ, ಬೇಲಿಗೆ ಡಿಕ್ಕಿ ಹೊಡೆಯುವುದರೊಂದಿಗೆ ಪತನವಾಯಿತು. ಎರಡು ಎಂಜಿನ್ ಹೊಂದಿರುವ ವಿಮಾನವು ರನ್ ವೇಯಿಂದ ಜಾರಿ, ಅಪಘಾತಕ್ಕೀಡಾದ ಕೂಡಲೇ ಬೆಂಕಿ ಹೊತ್ತಿಕೊಂಡಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ನಂತರ ಕೆಲವೇ ಕ್ಷಣಗಳಲ್ಲಿ ದಟ್ಟ ಕಪ್ಪು ಹೊಗೆ ಆಕಾಶವನ್ನು ಆವರಿಸಿದೆ.
ಈ ಅಪಘಾತದಲ್ಲಿ ವಿಮಾನದ ಸಿಬ್ಬಂದಿಗಳಿರಬಹುದು ಎನ್ನಲಾದ ಇಬ್ಬರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಅಪಘಾತಕ್ಕೆ ಹಕ್ಕಿ ಬಡಿತ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣವಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.