ಆಗ್ನೇಯ ಏಶ್ಯಾದಲ್ಲಿ ಕೋವಿಡ್ ಪ್ರಕರಣ ಉಲ್ಬಣ: ನಿಯಂತ್ರಣ ಕ್ರಮ ಜಾರಿಗೆ ನಿರ್ಧಾರ
Photo : PTI
ಜಕಾರ್ತ: ಆಗ್ನೇಯ ಏಶ್ಯಾದ್ಯಂತ ಕೋವಿಡ್ ನಂತಹ ಉಸಿರಾಟದ ಸೋಂಕುಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಗಳು ವಿಮಾನ ನಿಲ್ದಾಣಗಳಲ್ಲಿ ತಾಪಮಾನ ಸ್ಕ್ಯಾನರ್ ಸ್ಥಾಪಿಸುವುದು, ಮಾಸ್ಕ್ ಧರಿಸಲು ಸಲಹೆ ಸೇರಿದಂತೆ ಸೋಂಕು ನಿಯಂತ್ರಣ ಕ್ರಮಗಳನ್ನು ಮರಳಿ ಜಾರಿಗೊಳಿಸಲು ನಿರ್ಧರಿಸಿವೆ.
ಸಿಂಗಾಪುರದಲ್ಲಿ ನವೆಂಬರ್ 27ರಂದು 22,000ದಷ್ಟು ಕೋವಿಡ್ ಪ್ರಕರಣ ದಾಖಲಾಗಿದ್ದರೆ ಡಿಸೆಂಬರ್ 2ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ಇದು 32,035ಕ್ಕೆ ಏರಿಕೆಯಾಗಿದೆ. ಸಾಂಕ್ರಾಮಿಕದ ಬಿಎ.2.86 ರೂಪಾಂತರದ ಉಪವರ್ಗ ಜೆಎನ್.1 ಪ್ರಸ್ತುತ ಸಿಂಗಾಪುರದಲ್ಲಿ ದಾಖಲಾಗಿರುವ ಸೋಂಕಿನ ಪ್ರಕರಣದ 60%ದಷ್ಟಕ್ಕೆ ಕಾರಣವಾಗಿದೆ ಎಂದು ಸಿಂಗಾಪುರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂಡೊನೇಶ್ಯಾದಲ್ಲೂ ಸೋಂಕು ಪ್ರಕರಣ ಏಕಾಏಕಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಜಕಾರ್ತದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೋಣಿ ಟರ್ಮಿನಲ್, ಗಡಿ ತಪಾಸಣಾ ಠಾಣೆಗಳಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮರುಸ್ಥಾಪಿಸಲಾಗಿದೆ. ಕೋವಿಡ್-19 ಪ್ರಕರಣ ಉಲ್ಬಣಗೊಂಡಿರುವ ಪ್ರದೇಶಕ್ಕೆ ಪ್ರಯಾಣಿಸದಂತೆ, ಕೋವಿಡ್-19 ಲಸಿಕೆಯ ಎರಡು ಡೋಸ್ ಪಡೆಯುವಂತೆ, ಮಾಸ್ಕ್ ಧರಿಸುವಂತೆ ಮತ್ತು ಕೈಗಳನ್ನು ತೊಳೆದುಕೊಳ್ಳುವಂತೆ ಜನತೆಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಮಲೇಶ್ಯಾದಲ್ಲೂ ಕೋವಿಡ್-19 ಸೋಂಕು ಏರಿಕೆಯಾಗಿದ್ದು ನವೆಂಬರ್ 27ರಂದು 3,626 ಪ್ರಕರಣ ದಾಖಲಾಗಿದ್ದರೆ ಡಿಸೆಂಬರ್ 2ರಂದು ಈ ಪ್ರಮಾಣ 6,796ಕ್ಕೆ ಏರಿಕೆಯಾಗಿದೆ. ಜನತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ ಎಂದು ವರದಿಯಾಗಿದೆ.