ಸಿಂಗಾಪುರ ಅಧ್ಯಕ್ಷೀಯ ಚುನಾವಣೆ: ಭಾರತ ಮೂಲದ ಧರ್ಮನ್ ಷಣ್ಮುಗ ರತ್ನಂ ಗೆಲುವು
Photo: twitter.com/IndianTechGuide
ಹೊಸದಿಲ್ಲಿ: ಸಿಂಗಾಪುರದ ಆಡಳಿತಾರೂಢ ಪಕ್ಷದ ಸದಸ್ಯ, ಮಾಜಿ ಸಚಿವ, ಭಾರತ ಮೂಲದ ಧರ್ಮನ್ ಷಣ್ಮುಗರತ್ನಂ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡ 70.4 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ನಗರ ದೇಶದ ಅಧ್ಯಕ್ಷರು ದೇಶದ ಮುಖ್ಯಸ್ಥರಾಗಿರುತ್ತಾರೆ ಹಾಗೂ ಪ್ರಧಾನಿ ಲೀ ಸೀನ್ ಲೂಂಗ್ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ. ಇಬ್ಬರು ಚೀನಾ ಮೂಲದ ಅಭ್ಯರ್ಥಿಗಳು ಸೇರಿದಂತೆ ಷಣ್ಮುಗರತ್ನಂ ತ್ರಿಕೋನ ಸ್ಪರ್ಧೆ ಎದುರಿಸುತ್ತಿದ್ದರು ಎಂದು ಮಾದರಿ ಎಣಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದ ಚುನಾವಣಾ ಇಲಾಖೆ ಪ್ರಕಟಿಸಿದೆ.
66 ವರ್ಷ ವಯಸ್ಸಿನ ಷಣ್ಮುಗರತ್ನಂ, ಭಾರತ ಮೂಲದ ಮೂರನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ತರಣ್ ಜುರಾಂಗ್ ಫುಡ್ ಸೆಂಟರ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಧರ್ಮನ್, ಸಿಂಗಾಪುರದ ಜನತೆಯ ಅಭೂತಪೂರ್ವಬೆಂಬಲದಿಂದ ಪುನೀತನಾಗಿದ್ದೇನೆ ಎಂದು ಹೇಳಿದ್ದರು.
ದೇಶದ ಸಂಸ್ಕತಿ ವಿಶ್ವನಕ್ಷೆಯಲ್ಲಿ ಮಿನುಗುತಾರೆಯಾಗಿ ಹೊಳೆಯುವಂತೆ ಮಾಡುವ ಭರವಸೆಯೊಂದಿಗೆ ಕಳೆದ ಜುಲೈನಲ್ಲಿ ಧರ್ಮನ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ಆರಂಭಿಸಿದ್ದರು. 2001ರಲ್ಲಿ ರಾಜಕೀಯಕ್ಕೆ ಸೇರಿದ್ದ ಅವರು, ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಯಲ್ಲಿ ಎರಡು ದಶಕಗಳ ಕಾಲ ಸಾರ್ವಜನಿಕ ವಲಯದಲ್ಲಿ ಮತ್ತು ಸಚಿವ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು.
ಹಾಲಿ ಅಧ್ಯಕ್ಷೆ ಮೇಡಮ್ ಹಲೀಮ್ಹ್ ಜಾಕೋಬ್ ಅವರ ಆರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ 13ರಂದು ಮುಕ್ತಾಯವಾಗಲಿದೆ. ಇವರು ದೇಶದ 8ನೇ ಹಾಗೂ ಮೊಟ್ಟಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.