ಇಸ್ರೇಲ್ ಜೈಲಿನಲ್ಲಿ ನನಗೆ ಚಿಕಿತ್ಸೆ ನಿರಾಕರಿಸಲಾಗಿದೆ: ಬಿಡುಗಡೆ ಬಳಿಕ ಪತ್ರಕರ್ತೆ ಆರೋಪ

ಪತ್ರಕರ್ತೆ ರುಲಾ ಹಸ್ಸನೇನ್ (Photo credit: cpj.org)
ಜೆರುಸಲೇಂ : ಕದನ ವಿರಾಮದ ಭಾಗವಾಗಿ ಇಸ್ರೇಲ್ ಜೈಲಿನಿಂದ ಬಿಡುಗಡೆಯಾದ ಫೆಲೆಸ್ತೀನ್ ಕೈದಿಗಳ ಗುಂಪಿನಲ್ಲಿದ್ದ ಪತ್ರಕರ್ತೆ ರುಲಾ ಹಸ್ಸನೇನ್ ಅವರು ಜೈಲಿನಲ್ಲಿ ನನಗೆ ಆರೋಗ್ಯ ಸಮಸ್ಯೆಯಿದ್ದರೂ ಚಿಕಿತ್ಸೆ ಕೊಡಿಸದೆ ವೈದ್ಯಕೀಯ ನಿರ್ಲಕ್ಷ್ಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಪತ್ರಕರ್ತೆ ರುಲಾ ಹಸನೈನ್ ಅವರ ಸಹೋದರಿ Al Jazeera ಜೊತೆ ಮಾತನಾಡಿದ್ದು, ಸಹೋದರಿ ಅನಾರೋಗ್ಯ ಪೀಡಿತಳಾಗಿದ್ದರೂ ಜೈಲಿನಲ್ಲಿ ಚಿಕಿತ್ಸೆ ಕೊಡಿಸದೆ ನಿರ್ಲಕ್ಷಿಸಲಾಗಿದೆ. ಆಕೆ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ರಮಲ್ಲಾ ಮೂಲದ ವಟ್ಟನ್ ಮೀಡಿಯಾ ನೆಟ್ವರ್ಕ್ ನ ಸಂಪಾದಕಿಯಾಗಿರುವ ರುಲಾ ಹಸ್ಸನೇನ್ ಅವರನ್ನು 2024ರ ಮಾರ್ಚ್ 19ರಂದು ಇಸ್ರೇಲ್ ಪಡೆಗಳು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿತ್ತು.
ನನ್ನ ಸಹೋದರಿ ಜೈಲಿನಲ್ಲಿ ಅಸ್ವಸ್ಥಗೊಂಡಾಗ ವೈದ್ಯಕೀಯ ನಿರ್ಲಕ್ಷ್ಯ ಮಾಡಲಾಗಿದೆ. ಇದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹಸ್ಸನೇನ್ ಅವರ ಸಹೋದರಿ ಹೇಳಿದ್ದಾರೆ.
ಗಾಝಾದಲ್ಲಿ 15 ತಿಂಗಳ ಯುದ್ಧವನ್ನು ನಿಲ್ಲಿಸಿದ ಕದನ ವಿರಾಮದ ಮೊದಲ ದಿನದಂದು ಇಸ್ರೇಲ್ 90 ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದ್ದು, ಹಮಾಸ್ ರವಿವಾರ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ ನೆರವು ಕಾರ್ಯಚಾರಣೆಯ ಭಾಗವಾಗಿ 630ಕ್ಕೂ ಹೆಚ್ಚು ಟ್ರಕ್ ಗಳು ಗಾಝಾ ಪಟ್ಟಿಯನ್ನು ಪ್ರವೇಶಿಸಿದೆ.