ಗಾಝಾ ವಿನಾಶವನ್ನು ಅಣಕಿಸಿದ ಆರೋಪ: ʼಝಾರಾʼ ಬಹಿಷ್ಕಾರಕ್ಕೆ ಆನ್ಲೈನ್ ಅಭಿಯಾನ
Photo credit: arabnews.com
ಲಂಡನ್: ಸ್ಪೇನ್ ದೇಶದ ಫ್ಯಾಷನ್ ಸಂಸ್ಥೆ ʼಝಾರಾʼ ಇದರ ಇತ್ತೀಚಿನ ಜಾಹೀರಾತು ಅಭಿಯಾನವು ಗಾಝಾದಲ್ಲಿನ ಸಾವುನೋವುಗಳು ಮತ್ತು ಅಪಾರ ನಷ್ಟವನ್ನು ವೈಭವೀಕರಿಸಿ ಅವುಗಳನ್ನು ಅಣಕಿಸುವಂತಿದೆ ಎಂಬ ಆರೋಪ ಕೇಳಿ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆಯಲ್ಲದೆ ಝಾರಾ ಬ್ರ್ಯಾಂಡ್ ಅನ್ನು ಬಹಿಷ್ಕರಿಸುವಂತೆಯೂ ಹಲವರು ಕರೆ ನೀಡಿದ್ದಾರೆ.
ʼಜಾಕೆಟ್ʼ ಎಂಬ ಹೆಸರಿನ ಈ ಅಭಿಯಾನವು ಝಾರಾ ಬ್ರ್ಯಾಂಡ್ನ ಅಟೆಲಿಯರ್ ಸರಣಿಯ ಭಾಗವಾಗಿದ್ದು ಅದರಲ್ಲಿ ರೂಪದರ್ಶಿ ಕ್ರಿಸ್ಟೆನ್ ಮೆಕ್ಮೆನಾಮಿ ಅವರು ಬಿಳಿ ಬಟ್ಟೆಯಲ್ಲಿ ಸುತ್ತಿರುವ ಬೊಂಬೆಯನ್ನು ಹೊತ್ತುಕೊಂಡಿರುವಂತೆ ತೋರಿಸಲಾಗಿದ್ದರೆ ಇತರ ಬೊಂಬೆಗಳ ಕೈಕಾಲುಗಳಿಲ್ಲದಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೆ ಸುತ್ತಲೂ ಅವಶೇಷಗಳು ತುಂಬಿರುವ ಚಿತ್ರಣ ನೀಡಲಾಗಿದೆ.
ಗಾಝಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದ ಚಿತ್ರಣವನ್ನೇ ಈ ಜಾಹೀರಾತು ಅಭಿಯಾನ ಬಿಂಬಿಸಿದೆ. ಹಿನ್ನೆಲೆಯಲ್ಲಿರುವ ಪ್ಲಾಸ್ಟರ್ ಬೋರ್ಡಿನ ಒಂದು ಭಾಗವು ಫೆಲೆಸ್ತೀನ್ನ ಭೂಪಟದಂತೆಯೇ ಇದೆ ಎಂದೂ ಒಬ್ಬರು ಹೇಳಿಕೊಂಡಿದ್ದಾರೆ.
ಗಾಝಾದಲ್ಲಿ ನಡೆಯುತ್ತಿರುವ ವಿನಾಶ ಹಾಗೂ ಅಲ್ಲಿ ನಡೆಯುತ್ತಿರುವ ನರಮೇಧವನ್ನು ಝಾರಾ ಅಣಕಿಸುತ್ತಿದೆ ಎಂದು ಒಬ್ಬರು ಬರೆದಿದ್ದಾರೆ.
ಟೀಕೆಗಳ ಬೆನ್ನಲ್ಲೇ ತನ್ನ ವಿವಾದಿತ ಪೋಸ್ಟ್ಗಳನ್ನು ಝಾರಾ ಡಿಲೀಟ್ ಮಾಡಿದೆಯಾದರೂ ಇನ್ನೂ ಯಾವುದೇ ಹೇಳಿಕೆ ಬಿಡುಗಡೆಗೊಳಿಸಿಲ್ಲ.
“ಸಾವು ಹಾಗೂ ವಿನಾಶವನ್ನು ಫ್ಯಾಷನ್ಗೆ ಹಿನ್ನೆಲೆಯಾಗಿಸುವುದು ಒಪ್ಪಲಾಗದು. ಇದು ನಮಗೆ ಗ್ರಾಹಕರಾಗಿ ಆಕ್ರೋಶ ಮೂಡಿಸುತ್ತದೆ, ಝಾರಾವನ್ನು ಬಹಿಷ್ಕರಿಸಿ,” ಎಂದು ಫೆಲೆಸ್ತೀನಿ ಕಲಾವಿದ ಹಾಝೆಮ್ ಹರ್ಬ್ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.