ದಕ್ಷಿಣ ಕೊರಿಯಾ: ಯೂನ್ ಸುಕ್ ಬಂಧನ ವಿಸ್ತರಣೆ ವಿರೋಧಿಸಿ ನ್ಯಾಯಾಲಯಕ್ಕೆ ನುಗ್ಗಿದ ಬೆಂಬಲಿಗರು

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ | NDTV
ಸಿಯೋಲ್: ವಾಗ್ದಂಡನೆಗೆ ಒಳಗಾಗಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಬಂಧನಾವಧಿಯನ್ನು ವಿಸ್ತರಿಸಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ರವಿವಾರ ಬೆಳಿಗ್ಗೆ ಸಿಯೋಲ್ ದಕ್ಷಿಣ ಜಿಲ್ಲಾ ನ್ಯಾಯಾಲಯದ ಕಟ್ಟಡದೊಳಗೆ ನುಗ್ಗಿ ಕಿಟಕಿ ಬಾಗಿಲುಗಳನ್ನು ಮುರಿದು ದಾಂಧಲೆ ನಡೆಸಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 3ರಂದು ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ದಂಗೆಯ ಆರೋಪ ಎದುರಿಸುತ್ತಿರುವ ಯೂನ್ರನ್ನು ಕಳೆದ ಬುಧವಾರ ದಕ್ಷಿಣ ಕೊರಿಯಾ ಪೊಲೀಸರು ಬಂಧಿಸಿದ್ದರು.
ಇದರೊಂದಿಗೆ ಯೂನ್ ಸುಕ್ ಬಂಧನಕ್ಕೊಳಗಾದ ದಕ್ಷಿಣ ಕೊರಿಯಾದ ಮೊದಲ ಅಧ್ಯಕ್ಷ ಎನಿಸಿಕೊಂಡಿದ್ದರು. ವಿಚಾರಣೆ ಮುಂದುವರಿಸಬೇಕಿರುವ ಕಾರಣ ಯೂನ್ ಸುಕ್ ಬಂಧನವನ್ನು ವಿಸ್ತರಿಸಬೇಕೆಂಬ ಕೋರಿಕೆಯನ್ನು ಮಾನ್ಯ ಮಾಡಿರುವುದಾಗಿ ನ್ಯಾಯಾಲಯ ರವಿವಾರ ಬೆಳಿಗ್ಗೆ ಘೋಷಿಸಿದ ಬೆನ್ನಲ್ಲೇ ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಅಧ್ಯಕ್ಷರ ಬೆಂಬಲಿಗರು ಪ್ರತಿಭಟನೆ ಮತ್ತು ದಾಂಧಲೆ ನಡೆಸಿರುವುದಾಗಿ ವರದಿಯಾಗಿದೆ.
ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣ ಪ್ರತಿಭಟನಾಕಾರರನ್ನು ತಡೆಯುವಲ್ಲಿ ವಿಫಲರಾದರು. ನ್ಯಾಯಾಲಯದ ಕಟ್ಟಡದ ಮುಖ್ಯ ದ್ವಾರದ ಬಳಿ ಕಾವಲು ನಿಂತಿದ್ದ ಪೊಲೀಸರತ್ತ ಅಗ್ನಿಶಾಮಕವನ್ನು ಸ್ಫೋಟಿಸಿದರು. ಬಳಿಕ ಕಟ್ಟಡದ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೆಲ ಘಂಟೆಗಳ ಬಳಿಕ ಪರಿಸ್ಥಿತಿಯನ್ನು ನಿಯಂತಿಸುವಲ್ಲಿ ಪೊಲೀಸರು ಸಫಲರಾಗಿದ್ದು ದಾಂಧಲೆಗೆ ಸಂಬಂಧಿಸಿ 46 ಪ್ರತಿಭಟನಾಕಾರರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರಜಾಪ್ರಭುತ್ವ ಸಮಾಜದಲ್ಲಿ ಊಹಿಸಲೂ ಸಾಧ್ಯವಿಲ್ಲದ ಕಾನೂನುಬಾಹಿರ ಹಿಂಸಾಚಾರದ ಬಗ್ಗೆ ಸರ್ಕಾರವು ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ. ಜನರು ಒಂದೆಡೆ ಗುಂಪು ಸೇರುವುದರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಉಸ್ತುವಾರಿ ಅಧ್ಯಕ್ಷ ಚೊಯ್ ಸ್ಯಾಂಗ್-ಮೊಕ್ ಹೇಳಿದ್ದಾರೆ. ಘರ್ಷಣೆಯಲ್ಲಿ 9 ಪೊಲೀಸರು ಸೇರಿದಂತೆ ಸುಮಾರು 40 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಯೊನ್ಹ್ಯಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.
ನ್ಯಾಯಾಲಯದ ಆವರಣದಲ್ಲಿ ನಡೆದ ಹಿಂಸಾಚಾರ ಘಟನೆ ದುರದೃಷ್ಟಕರ ಮತ್ತು ಇದರಿಂದ ಆಘಾತವಾಗಿದೆ ಎಂದು ಯೂನ್ ಸುಕ್ ಪ್ರತಿಕ್ರಿಯಿಸಿದ್ದು ಜನತೆ ತಮ್ಮ ಅಭಿಪ್ರಾಯಗಳನ್ನು ಶಾಂತ ರೀತಿಯಲ್ಲಿ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಆರೋಪಿಯು ಸಾಕ್ಷ್ಯಾಧಾರಗಳನ್ನು ನಾಶಗೊಳಿಸುವ ಸಾಧ್ಯತೆಯಿರುವುದರಿಂದ ಬಂಧನ ಅವಧಿಯನ್ನು ವಿಸ್ತರಿಸಬೇಕೆಂಬ ತನಿಖಾಧಾರಿಗಳ ಕೋರಿಕೆಯಂತೆ ಬಂಧನವನ್ನು 20 ದಿನಗಳವರೆಗೆ ವಿಸ್ತರಿಸಿ ನ್ಯಾಯಾಲಯ ಶನಿವಾರ ಆದೇಶಿಸಿತ್ತು. ಸಿಯೋಲ್ ಬಂಧನ ಕೇಂದ್ರದ ಪ್ರತ್ಯೇಕ ಸೆಲ್ನಲ್ಲಿ ಇರಿಸಲಾಗಿರುವ ಯೂನ್ ಸುಕ್ ರವಿವಾರ ಮಧ್ಯಾಹ್ನ ನಿಗದಿಯಾಗಿದ್ದ ವಿಚಾರಣೆಗೆ ಹಾಜರಾಗಲಿಲ್ಲ. ಮಧ್ಯಾಹ್ನ ಹಾಜರಾಗುವಂತೆ ಅಧ್ಯಕ್ಷರಿಗೆ ಸೂಚಿಸಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ತಪ್ಪಾದ ನ್ಯಾಯವ್ಯಾಪ್ತಿಯಲ್ಲಿ ವಾರಂಟ್ ಹೊರಡಿಸಿರುವುದರಿಂದ ಯೂನ್ ಸುಕ್ ಬಂಧನ ಕಾನೂನುಬಾಹಿರ ಎಂದು ವಕೀಲರು ವಾದಿಸಿದ್ದಾರೆ.