ದಕ್ಷಿಣ ಕೊರಿಯಾ ಅಧ್ಯಕ್ಷರ ದೋಷಾರೋಪಣೆ ನಿರ್ಣಯ ವಿಫಲ
ಯೂನ್ ಸುಕ್ ಯಿಯೋಲ್ PC : PTI/AP
ಸಿಯೋಲ್ : ದಕ್ಷಿಣ ಕೊರಿಯಾದಲ್ಲಿ ಸೇನಾಡಳಿತ ಕಾನೂನು ಘೋಷಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ರನ್ನು ದೋಷಾರೋಪಣೆಗೆ ಗುರಿಪಡಿಸುವ ವಿಪಕ್ಷಗಳ ನೇತೃತ್ವದ ನಿರ್ಣಯ ಶನಿವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿಫಲವಾಗಿದೆ.
ಅಸೆಂಬ್ಲಿಯಲ್ಲಿ ಒಟ್ಟು 195 ಸದಸ್ಯರು ಮತ ಚಲಾಯಿಸಿದ್ದಾರೆ. ಆದರೆ ಮತ ಚಲಾಯಿಸಿದ ಸದಸ್ಯರ ಸಂಖ್ಯೆಯು ಒಟ್ಟು ಸದಸ್ಯರ ಮೂರನೇ ಎರಡರಷ್ಟು ಬಹುಮತವನ್ನು ತಲುಪಲಿಲ್ಲ. ಆದ್ದರಿಂದ ಈ ವಿಷಯದ ಮೇಲಿನ ಮತವು ಮಾನ್ಯವಾಗಿಲ್ಲ ಎಂದು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ವೂ ವೊನ್-ಶಿಕ್ ಹೇಳಿದ್ದಾರೆ. 300 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಅಂದರೆ 200 ಮತಗಳ ಅಗತ್ಯವಿತ್ತು. ಸದನದಲ್ಲಿ ವಿಪಕ್ಷಗಳು 192 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಮೈತ್ರಿಕೂಟದ ಮೂವರು ನಿರ್ಣಯದ ಪರ ಮತ ಹಾಕಿದ್ದರು. ಅಧ್ಯಕ್ಷ ಯೂನ್ ಅವರ ಪೀಪಲ್ ಪವರ್ ಪಾರ್ಟಿ(ಪಿಪಿಪಿ)ಯ ಸದಸ್ಯರು ಮತದಾನವನ್ನು ಬಹಿಷ್ಕರಿಸಿದ್ದರು.
ಅಧ್ಯಕ್ಷರ ವಿರುದ್ಧ ಮತ್ತೊಂದು ದೋಷಾರೋಪಣೆ ನಿರ್ಣಯ ಮಂಡಿಸಲು ವಿಪಕ್ಷಗಳಿಗೆ ಡಿಸೆಂಬರ್ 11ರ ಬಳಿಕವಷ್ಟೇ ಅವಕಾಶವಿದೆ.