ಬಂಧನ ವಾರಾಂಟ್ ಧಿಕ್ಕರಿಸಿದ ಯೂನ್ ಸುಕ್ ಯೆಯೋಲ್ | ಪೊಲೀಸರನ್ನು ದಿಗ್ಬಂಧಿಸಿದ ಅಧ್ಯಕ್ಷರ ಭದ್ರತಾ ಪಡೆ
ದಕ್ಷಿಣ ಕೊರಿಯಾ ರಾಜಧಾನಿಯಲ್ಲಿ ಹೈಡ್ರಾಮಾ
ಯೂನ್ ಸುಕ್ ಯಿಯೋಲ್ PC : PTI/AP
ಸಿಯೋಲ್ : ದೋಷಾರೋಪಣೆಗೆ ಒಳಗಾಗಿ ಅಮಾನತುಗೊಂಡಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಬಂಧನ ವಾರಾಂಟ್ ಅನ್ನು ಧಿಕ್ಕರಿಸಿದ ಬಳಿಕ ಅವರನ್ನು ಬಂಧಿಸುವ ಪ್ರಯತ್ನವನ್ನು ರದ್ದುಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಿಲಿಟರಿ ಕಾನೂನು ಜಾರಿಗೊಳಿಸಿದ್ದಕ್ಕಾಗಿ ಅಧ್ಯಕ್ಷ ಯೂನ್ ಸುಕ್ ಯೆಯೋಲ್ರನ್ನು ಸಂಸತ್ನಲ್ಲಿ ದೋಷಾರೋಪಣೆಗೆ ಗುರಿಪಡಿಸಿ ಅಮಾನತುಗೊಳಿಸಲಾಗಿತ್ತು. ಮಿಲಿಟರಿ ಕಾನೂನು ಜಾರಿಗೊಳಿಸುವ ಮೂಲಕ ಅಧಿಕಾರ ದುರುಪಯೋಗ ಆರೋಪದ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಹೊರಡಿಸಿದ್ದ ವಾರಾಂಟ್ ಅನ್ನು ಯೆಯೋಲ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಈ ವಾರದ ಆರಂಭದಲ್ಲಿ ವಾರಾಂಟ್ ಜಾರಿಯಾಗಿತ್ತು.
ಯೂನ್ ಯೆಯೋಲ್ರನ್ನು ಬಂಧಿಸಲು 150 ಪೊಲೀಸರ ತಂಡ ಶುಕ್ರವಾರ ಮಧ್ಯ ಸಿಯೋಲ್ನಲ್ಲಿರುವ ಅವರ ನಿವಾಸಕ್ಕೆ ತೆರಳಿತ್ತು. ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಯೂನ್ ಬೆಂಬಲಿಗರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಮನೆಯ ಕಂಪೌಂಡ್ನ ಒಳಗೆ ಯೂನ್ ಅವರ ಭದ್ರತಾ ಸಿಬ್ಬಂದಿ ಮಾನವ ಗೋಡೆ ರಚಿಸಿ ಪೊಲೀಸರು ಒಳಪ್ರವೇಶಿಸದಂತೆ ತಡೆದರು. ಸುಮಾರು 6 ಗಂಟೆಗಳ ನಾಟಕೀಯ ಬೆಳವಣಿಗೆ, ಬಿಕ್ಕಟ್ಟಿನ ಬಳಿಕ ಪೊಲೀಸರು ಬಂಧನ ಪ್ರಯತ್ನ ಕೈಬಿಟ್ಟು ಬರಿಗೈಯಲ್ಲಿ ತೆರಳಿದರು. ಆಗ ಯೂನ್ ಬೆಂಬಲಿಗರು ಹರ್ಷೋದ್ಘಾರ ಮಾಡಿ ನರ್ತಿಸಿದರು ಎಂದು ವರದಿಯಾಗಿದೆ.
ಶುಕ್ರವಾರ ಬೆಳಿಗ್ಗೆ ಸುಮಾರು 8 ಗಂಟೆಗೆ (ಸ್ಥಳೀಯ ಕಾಲಮಾನ) ಯೂನ್ ಅವರ ನಿವಾಸಕ್ಕೆ 12 ಪೊಲೀಸ್ ವ್ಯಾನ್ಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಗಮಿಸಿದ್ದು 20 ಮಂದಿಯ ತಂಡ ನಿವಾಸದ ಒಳಗೆ ತೆರಳಲು ಮುಂದಾದಾಗ ಅವರನ್ನು ಯೂನ್ ಬೆಂಬಲಿಗರು ತಡೆದಿದ್ದಾರೆ. ಬಳಿಕ ಹೆಚ್ಚುವರಿ 130 ಪೊಲೀಸರು ಆಗಮಿಸಿ ಬೆಂಬಲಿಗರನ್ನು ಚದುರಿಸಿದಾಗ ಸುಮಾರು 60 ಪೊಲೀಸರು ಮನೆಯ ಕಂಪೌಂಡ್ ಪ್ರವೇಶಿಸಿದ್ದಾರೆ. ಆಗ ಅವರನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ ಸುಮಾರು 6 ಗಂಟೆ ಪೊಲೀಸರನ್ನು ದಿಗ್ಬಂಧನದಲ್ಲಿ ಇರಿಸಿದ್ದಾರೆ. (ಆರೋಪ ಸಾಬೀತು ಆಗುವವರೆಗೆ ಯೂನ್ ರಕ್ಷಣೆ ಭದ್ರತಾ ಸಿಬ್ಬಂದಿಯ ಹೊಣೆಯಾಗಿದೆ). ಒಂದು ಹಂತದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ನಡುವೆ ಸಣ್ಣಮಟ್ಟಿನ ಘರ್ಷಣೆಯೂ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಒಂದು ವೇಳೆ ಪೊಲೀಸರು ಯಶಸ್ವಿಯಾದರೆ, ಯೂನ್ ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಬಂಧಿಸಲ್ಪಟ್ಟ ಮೊದಲ ಹಾಲಿ ಅಧ್ಯಕ್ಷರಾಗಿರುತ್ತಿದ್ದರು.
ಯೂನ್ ಅವರು ಕಾನೂನು ಪ್ರಕ್ರಿಯೆಯನ್ನು ಗೌರವಿಸದಿರುವುದು ವಿಷಾದನೀಯ ಎಂದು ತನಿಖಾ ಸಮಿತಿ ಖಂಡಿಸಿದ್ದು, ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಉಸ್ತುವಾರಿ ಅಧ್ಯಕ್ಷರನ್ನು ಕೋರಲು ನಿರ್ಧರಿಸಿದೆ. ( ಯೂನ್ ಅವರ ಭದ್ರತಾ ವ್ಯವಸ್ಥೆ ಉಸ್ತುವಾರಿ ಅಧ್ಯಕ್ಷರ ನಿಯಂತ್ರಣದಲ್ಲಿದೆ.) ಪೊಲೀಸರ ಕಾರ್ಯಾಚರಣೆಯಲ್ಲಿ ಹಲವು ಸಿಬ್ಬಂದಿಗಳು ಗಾಯಗೊಂಡಿದ್ದು ಅಧ್ಯಕ್ಷರ ನಿವಾಸಕ್ಕೆ ಅಕ್ರಮ ಪ್ರವೇಶ ಮಾಡಿರುವುದಕ್ಕೆ ಪೊಲೀಸರನ್ನು ಹೊಣೆಯಾಗಿಸುವುದಾಗಿ ಅಧ್ಯಕ್ಷರ ಭದ್ರತಾ ತಂಡ ಹೇಳಿದೆ.
ಈ ಮಧ್ಯೆ, ಯೂನ್ ಅವರ ಭದ್ರತಾ ಸೇವೆಗಳ ಮುಖ್ಯಸ್ಥರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ಜಾರಿಗೊಳಿಸಿರುವುದಾಗಿ `ಯೊನ್ಹ್ಯಾಪ್' ಸುದ್ದಿಸಂಸ್ಥೆ ವರದಿ ಮಾಡಿದೆ.
► ಮತ್ತೊಂದು ಪ್ರಯತ್ನ
ಯೂನ್ ಸುಕ್ ಬಂಧನಕ್ಕೆ ಪೊಲೀಸರು ಈ ವಾರಾಂತ್ಯದೊಳಗೆ ಮತ್ತೊಂದು ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಮಾಜಿ ಮುಖ್ಯ ನ್ಯಾಯಾಧಿಕಾರಿಯಾಗಿರುವ ಯೂನ್, ತನ್ನ ರಕ್ಷಣೆಗೆ ಲಭ್ಯವಿರುವ ಕಾನೂನು ಪ್ರಕ್ರಿಯೆಯ ಲೋಪದೋಷಗಳನ್ನು ಚೆನ್ನಾಗಿ ಅರಿತಿದ್ದಾರೆ. ಬಂಧನ ವಾರಾಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆ ನಡೆಸುತ್ತಿರುವ ತಂಡಕ್ಕೆ ಅಮಾನತುಗೊಂಡಿರುವ ಅಧ್ಯಕ್ಷರನ್ನು ಬಂಧಿಸುವ ಅಧಿಕಾರವಿಲ್ಲ ಎಂದು ಯೂನ್ ಸುಕ್ ಅವರ ಕಾನೂನು ಸಲಹೆಗಾರರ ತಂಡ ಪ್ರತಿಪಾದಿಸಿದೆ.