ದಕ್ಷಿಣ ಕೊರಿಯಾ ಅಧ್ಯಕ್ಷರ ದೋಷಾರೋಪಣೆಗೆ ಸಂಸತ್ತು ಅಂಗೀಕಾರ | ಅಧ್ಯಕ್ಷರ ಅಧಿಕಾರ ಅಮಾನತು
ಮಧ್ಯಂತರ ಅಧ್ಯಕ್ಷರಾಗಿ ಪ್ರಧಾನಿ ಹ್ಯಾನ್ ಡುಕ್
PC : PTI\AP
ಸಿಯೋಲ್ : ಮಿಲಿಟರಿ ಕಾನೂನು ಜಾರಿಗೊಳಿಸಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ರನ್ನು ದೋಷಾರೋಪಣೆಗೆ ಗುರಿಪಡಿಸುವ ನಿರ್ಣಯಕ್ಕೆ ದೇಶದ ಸಂಸತ್ತು ಅಂಗೀಕಾರ ನೀಡಿದೆ.
ಅಧ್ಯಕ್ಷರ ವಿರುದ್ಧದ ದೋಷಾರೋಪಣೆ ನಿರ್ಣಯವನ್ನು ವಿರೋಧ ಪಕ್ಷಗಳು ಮಂಡಿಸಿದ್ದು 300 ಸಂಸದರಲ್ಲಿ 204 ಸಂಸದರು ನಿರ್ಣಯದ ಪರ ಮತ್ತು 85 ಸಂಸದರು ವಿರುದ್ಧ ಮತ ಹಾಕಿದ್ದಾರೆ. ಮೂವರು ಸಂಸದರು ಮತದಾನಕ್ಕೆ ಹಾಜರಾಗಲಿಲ್ಲ. 8 ಮತಗಳನ್ನು ಅಸಿಂಧುಗೊಳಿಸಲಾಗಿದೆ.
ಯೂನ್ ಸರಣಿ ಗಲಭೆಗಳನ್ನು ನಡೆಸುವ ಮೂಲಕ ಮತ್ತು ರಾಷ್ಟ್ರೀಯ ಅಸೆಂಬ್ಲಿ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಮೂಲಕ ದಂಗೆ ಎಸಗಿದ್ದಾರೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ನಿರ್ಣಯ ಅಂಗೀಕಾರಗೊಂಡಿರುವುದರಿಂದ ಯೂನ್ ಅವರ ಅಧ್ಯಕ್ಷೀಯ ಅಧಿಕಾರ ಮತ್ತು ಕರ್ತವ್ಯಗಳು ಅಮಾನತುಗೊಂಡಿವೆ. ಪ್ರಧಾನಿ ಹ್ಯಾನ್ ಡುಕ್-ಸೂ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಯೂನ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಸಾಂವಿಧಾನಿಕ ಕೋರ್ಟ್ ಪರಿಶೀಲಿಸಿ 180 ದಿನಗಳೊಳಗೆ ತೀರ್ಪು ನೀಡಲಿದೆ. ಅದುವರೆಗೆ ಪ್ರಧಾನಿ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಯೂನ್ ಅವರ ಪದಚ್ಯುತಿಯನ್ನು ಸಾಂವಿಧಾನಿಕ ನ್ಯಾಯಾಲಯ ಎತ್ತಿಹಿಡಿದರೆ, 60 ದಿನಗಳೊಳಗೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ.
75 ವರ್ಷದ ಹ್ಯಾನ್ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ನಾಯಕತ್ವದ ಹುದ್ದೆ ನಿರ್ವಹಿಸಿದ್ದು 2007-08ರಲ್ಲಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಅಮೆರಿಕಕ್ಕೆ ರಾಯಭಾರಿಯಾಗಿ, ವಿತ್ತಸಚಿವ, ವಾಣಿಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು 2022ರಲ್ಲಿ ಅಧ್ಯಕ್ಷ ಯೂನ್ ಸುಕ್ ಮತ್ತೆ ಪ್ರಧಾನಿ ಹುದ್ದೆಗೆ ನೇಮಕಗೊಳಿಸಿದ್ದರು.