ಸಂಸತ್ತಿನಲ್ಲಿ ಸೋಲಿನ ಬಳಿಕ ಮಿಲಿಟರಿ ಕಾನೂನು ಹಿಂಪಡೆದ ದಕ್ಷಿಣ ಕೊರಿಯಾ ಅಧ್ಯಕ್ಷ
ಸಿಯೋಲ್: ರಾಜಕೀಯ ಪ್ರಹಸನದ ಉದ್ವಿಗ್ನಕರ ರಾತ್ರಿಯ ಬಳಿಕ, ಕೆಲ ಗಂಟೆಗಳ ಹಿಂದಷ್ಟೇ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಪ್ರಕಟಿಸಿದ್ದ ಮಿಲಿಟರಿ ಕಾನೂನು ಡಿಕ್ರಿಯನ್ನು ದಕ್ಷಿಣ ಕೊರಿಯಾ ಸಚಿವ ಸಂಪುಟ ಬುಧವಾರ ಮುಂಜಾನೆ ರದ್ದುಪಡಿಸಿದೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರ ನಡೆಯುತ್ತಿದ್ದ ವೇಳೆ ಮಂಗಳವಾರ ರಾತ್ರಿ, 40 ವರ್ಷಗಳ ಬಳಿಕ ಮೊದಲ ಬಾರಿಗೆ ಈ ಆಘಾತಕಾರಿ ಘೋಷಣೆ ಮೂಲಕ ಮಿಲಿಟರಿ ಕಾನೂನು ಜಾರಿಯನ್ನು ಪ್ರಕಟಿಸಿದ್ದರು.
ದೇಶವಿರೋಧಿ ಶಕ್ತಿಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದು, ಉತ್ತರ ಕೊರಿಯಾದಿಂದ ಎದುರಿಸುತ್ತಿರುವ ಅಪಾಯದಿಂದ ರಕ್ಷಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಿದ್ದರು. "ಈ ಮಿಲಿಟರಿ ಕಾನೂನಿನ ಮೂಲಕ ನಾನು ದಕ್ಷಿಣ ಕೊರಿಯಾವನ್ನು ಮರು ನಿರ್ಮಾಣ ಮಾಡುತ್ತೇನೆ ಮತ್ತು ರಕ್ಷಿಸುತ್ತೇನೆ" ಎಂದು ಹೇಳಿದ್ದರು. ಈ ಘೋಷಣೆಯ ಬೆನ್ನಲ್ಲೇ, ಎಲ್ಲ ರಾಜಕೀಯ ಚಟುವಟಿಕೆಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸುವ ಆದೇಶ ಹೊರಡಿಸಿದ್ದರು.
ನ್ಯಾಷನಲ್ ಅಸೆಂಬ್ಲಿಯನ್ನು ಮುಚ್ಚಿ, ಛಾವಣಿಯ ಮೇಲೆ ಹೆಲಿಕಾಪ್ಟರ್ಗಳು ಕಂಡುಬಂದವು. ತಕ್ಷಣವೇ ಸೇನೆ ಕಟ್ಟಡಕ್ಕೆ ಪ್ರವೇಶಿಸಿದ್ದು, ನೂರಾರು ಮಂದಿ ಪ್ರತಿಭಟನಾಕಾರರು ಸಂಸತ್ ಭವನದ ಮುಂದೆ ಗುಂಪು ಸೇರಿ ಪ್ರತಿಭಟನೆ ಆರಂಭಿಸಿದ್ದರು.