ದಕ್ಷಿಣ ಸುಡಾನ್ ಹಿಂಸಾಚಾರಕ್ಕೆ 80 ಬಲಿ : ವಿಶ್ವಸಂಸ್ಥೆ ಹೇಳಿಕೆ

ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ : ದಕ್ಷಿಣ ಸುಡಾನ್ನಲ್ಲಿ ಇತ್ತೀಚೆಗೆ ಭುಗಿಲೆದ್ದ ಹಿಂಸಾಚಾರಕ್ಕೆ ಒಂದು ನಗರದಲ್ಲೇ ಕನಿಷ್ಠ 80 ಮಂದಿ ಸಾವನ್ನಪ್ಪಿದ್ದು ಎರಡು ರಾಜ್ಯಗಳು ದುರಂತದ ಅಂಚಿನಲ್ಲಿವೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕೊರ್ಡೊಫಾನ್ ಮತ್ತು ಬ್ಲೂನೈಲ್ ರಾಜ್ಯಗಳಲ್ಲಿ ಕಳೆದ ವಾರ ಸೇನೆ ಮತ್ತು ಸುಡಾನ್ ಪೀಪಲ್ಸ್ ಲಿಬರೇಷನ್ ಮೂವ್ಮೆಂಟ್ ನಾರ್ಥ್(ಎಸ್ಪಿಎಲ್ಎಂ-ಎನ್)ನ ಗುಂಪಿನ ನಡುವೆ ಸಂಘರ್ಷ ಪುನರಾರಂಭಗೊಂಡಿತ್ತು. ದಕ್ಷಿಣ ಕೊರ್ಡೊಫಾನ್ ರಾಜ್ಯದ ರಾಜಧಾನಿ ಕಡುಗ್ಲಿಯಲ್ಲೇ ಕನಿಷ್ಠ 80 ಮಂದಿ ಸಾವನ್ನಪ್ಪಿರುವುದಾಗಿ ಸುಡಾನ್ಗೆ ವಿಶ್ವಸಂಸ್ಥೆಯ ಸ್ಥಾನಿಕ ಮತ್ತು ಮಾನವೀಯ ಸಂಯೋಜಕಿ ಕ್ಲೆಮೆಂಟಿನ್ ಎನ್ಕ್ವೆಟಾ ಸಲಾಮಿ ಹೇಳಿದ್ದಾರೆ.
ಕಡುಗ್ಲಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಮಾನವ ಗುರಾಣಿಯಾಗಿ ಬಳಸಿರುವುದಾಗಿ ವರದಿಯಾಗಿದೆ. ಮಾನವೀಯ ನೆರವು ವಿತರಣೆಗೆ ಅಡ್ಡಿಪಡಿಸುವುದನ್ನು ಮಕ್ಕಳ ಸಹಿತ ನಾಗರಿಕರನ್ನು ಬಂಧನಲ್ಲಿರಿಸಿರುವುದನ್ನು ಖಂಡಿಸುತ್ತೇವೆ ಎಂದವರು ಹೇಳಿದ್ದಾರೆ.
2023ರ ಎಪ್ರಿಲ್ನಿಂದ ಸುಡಾನ್ನ ಸೇನೆ ಹಾಗೂ ಅರೆ ಸೇನಾಪಡೆ (ರ್ಯಾಪಿಡ್ ಸಪೋರ್ಟ್ ಫೋರ್ಸಸ್) ನಡುವೆ ಅಧಿಕಾರ ನಿಯಂತ್ರಣಕ್ಕಾಗಿ ಯುದ್ಧ ಮುಂದುವರಿದಿದ್ದು ವ್ಯಾಪಕ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.
-----