ದಕ್ಷಿಣ ಸುಡಾನ್ ಹಿಂಸಾಚಾರದಲ್ಲಿ ಕನಿಷ್ಠ 80 ಮಂದಿ ಮೃತ್ಯು: ವಿಶ್ವಸಂಸ್ಥೆ

Photo Credit | UN
ಖಾರ್ಟೂಮ್: ಇತ್ತೀಚೆಗೆ ದಕ್ಷಿಣ ಸುಡಾನ್ನ ಎರಡು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಒಂದು ರಾಜ್ಯದಲ್ಲೇ ಹಿಂಸಾಚಾರಕ್ಕೆ ಕನಿಷ್ಠ 80 ಮಂದಿ ಬಲಿಯಾಗಿದ್ದಾರೆ. ಈ ಎರಡು ರಾಜ್ಯಗಳು ದುರಂತದ ಅಂಚಿನಲ್ಲಿವೆ ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ.
ದಕ್ಷಿಣ ಕೊರ್ಡೊಫಾನ್ ಮತ್ತು ಬ್ಲೂ ನೈಲ್ ರಾಜ್ಯಗಳಲ್ಲಿ ಸೇನಾಪಡೆ ಹಾಗೂ `ಸುಡಾನ್ ಪೀಪಲ್ಸ್ ಲಿಬರೇಷನ್ ಮೂಮೆಂಟ್-ನಾರ್ಥ್' (ಎಸ್ಪಿಎಲ್ಎಂ-ಎನ್) ಸಂಘಟನೆಯ ನಡುವೆ ಕಳೆದ ವಾರ ಸಂಘರ್ಷ ಮರುಕಳಿಸಿದೆ. ದಕ್ಷಿಣ ಕೊರ್ಡೊಫಾನ್ ರಾಜ್ಯದ ರಾಜಧಾನಿ ಕಡುಗ್ಲಿಯಲ್ಲಿ ಕನಿಷ್ಠ 80 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್ನಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಮತ್ತು ಮಾನವೀಯ ಸಂಯೋಜಕಿ ಕ್ಲೆಮೆಂಟಿನ್ ನೆಕೆವೆಟ-ಸಲಾಮಿ ಹೇಳಿದ್ದಾರೆ.
`ಕಡುಗ್ಲಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವುದು, ಮಕ್ಕಳು ಸೇರಿದಂತೆ ಪ್ರಜೆಗಳನ್ನು ಬಂಧನದಲ್ಲಿ ಇರಿಸಿರುವುದು ಮತ್ತು ಮಾನವೀಯ ನೆರವು ವಿತರಣೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ' ಎಂದವರು ಹೇಳಿದ್ದಾರೆ.
ಸುಡಾನ್ ಸೇನೆ ಮತ್ತು ಅರೆ ಸೇನಾಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸ್ನ ನಡುವೆ 2023ರ ಎಪ್ರಿಲ್ನಿಂದ ಮುಂದುವರಿದಿರುವ ಯುದ್ಧ ವ್ಯಾಪಕ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಎಸ್ಪಿಎಲ್ಎಂ-ಎನ್ ಉತ್ತರ ಸುಡಾನ್ನಲ್ಲಿ ಸಕ್ರಿಯವಾಗಿದ್ದು ಸೇನೆ ಮತ್ತು ಅರೆ ಸೇನಾಪಡೆ ಎರಡರ ವಿರುದ್ಧವೂ ಹೋರಾಟ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೇನೆ ಮತ್ತು ಎಸ್ಪಿಎಲ್ಎಂ-ಎನ್ ಪರಸ್ಪರರ ಮೇಲೆ ದಾಳಿಯನ್ನು ಹೆಚ್ಚಿಸಿದ್ದು ಉತ್ತರ ಸುಡಾನ್ನ ಪ್ರಾಂತಗಳನ್ನು ವಶಕ್ಕೆ ಪಡೆಯುವ ಪ್ರಯತ್ನದಲ್ಲಿ ನಾಗರಿಕರ ಮೇಲೆಯೂ ದಾಳಿ ನಡೆಸುತ್ತಿದೆ. ಹಿಂಸಾಚಾರದ ಉಲ್ಬಣದಿಂದ ಈಗಾಗಲೇ ಹಾನಿಗೊಂಡಿರುವ ಮಾನವೀಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಲಕ್ಷಾಂತರ ಮಂದಿಗೆ ಜೀವ ಉಳಿಸುವ ನೆರವು ಮರೀಚಿಕೆಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.