ಸ್ಪೇನ್ : ಶವ ಮಾರಾಟ ದಂಧೆ ಬಯಲಿಗೆ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಮ್ಯಾಡ್ರಿಡ್ : ಮೃತದೇಹಗಳನ್ನು ವಿಶ್ವವಿದ್ಯಾಲಯ ಸಂಶೋಧನಾ ವಿಭಾಗಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವುದಾಗಿ ಸ್ಪೇನ್ ಪೊಲೀಸರು ಹೇಳಿದ್ದಾರೆ.
ಅಂತ್ಯಸಂಸ್ಕಾರಕ್ಕೆ ತರಲಾದ ಮೃತದೇಹಗಳನ್ನು ಶವಾಗಾರದ ಮಾಲಕರು ಹಾಗೂ ಸಿಬ್ಬಂದಿ ಸೇರಿಕೊಂಡು ವಿವಿಯ ಸಂಶೋಧನಾ ವಿಭಾಗಕ್ಕೆ ಪ್ರತೀ ಮೃತದೇಹಕ್ಕೆ 1,200 ಯುರೋ (1,300 ಡಾಲರ್) ಹಣ ಪಡೆದು ಮಾರುತ್ತಿದ್ದರು. ವಿವಿಯಲ್ಲಿ ಮೃತದೇಹದ ಭಾಗಗಳನ್ನು ತುಂಡರಿಸಿ ಸಂಶೋಧನೆ ನಡೆಸಿದ ಬಳಿಕ ಅದನ್ನು ಅಂತ್ಯಸಂಸ್ಕಾರ ನಡೆಸುವುದಾಗಿ ವಾಪಾಸು ಪಡೆಯುತ್ತಿದ್ದರು. ಅಂತ್ಯಸಂಸ್ಕಾರ ನಡೆಸಲೂ ವಿವಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದರು. ಇವರು ಅನಾಥ ವ್ಯಕ್ತಿಗಳ ಶವಗಳನ್ನು ಹೆಚ್ಚಾಗಿ ಮಾರುತ್ತಿದ್ದ ಕಾರಣ ಇವರ ದಂಧೆಯ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ.
ಆಸ್ಪತ್ರೆ ಅಥವಾ ವೃದ್ಧಾಶ್ರಮದಲ್ಲಿ ಮೃತಪಟ್ಟ ಅನಾಥರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರ ಸಂಬಂಧಿಕರೆಂದು ಸುಳ್ಳುದಾಖಲೆ ಸೃಷ್ಟಿಸಿ ಮೃತದೇಹಗಳನ್ನು ಪಡೆದು ಬಳಿಕ ಅವುಗಳನ್ನು ವಿವಿಗಳ ಸಂಶೋಧನಾ ವಿಭಾಗಕ್ಕೆ ಮಾರಾಟ ಮಾಡುತ್ತಿದ್ದರು. ಈ ಜಾಲದಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ಗುರುತಿಸಲಾಗಿದ್ದು ಇದುವರೆಗೆ ಕನಿಷ್ಟ 11 ಮೃತದೇಹಗಳನ್ನು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಸುಳ್ಳುದಾಖಲೆ ಸಲ್ಲಿಸಿ ಆಸ್ಪತ್ರೆಯಿಂದ ಮೃತದೇಹವನ್ನು ಪಡೆಯುತ್ತಿದ್ದ ಇಬ್ಬರ ಮೇಲೆ ಅನುಮಾನ ಬಂದು ಅವರ ಮೇಲೆ ನಿಗಾ ವಹಿಸಲಾಗಿತ್ತು. ಅವರಿಬ್ಬರು ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಸಾಗಿಸದೆ ವಿವಿಗೆ ಸಾಗಿಸುವುದು ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದು ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನಿಂದ ತನ್ನ ದೇಹವನ್ನು ವಿವಿಯ ಸಂಶೋಧನಾ ವಿಭಾಗಕ್ಕೆ ದಾನ ನೀಡುವುದಾಗಿ ದಾಖಲೆ ಬರೆಸಿಕೊಂಡಿದ್ದರು. ಇದೀಗ ಶಂಕಿತ 4 ಆರೋಪಿಗಳ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.