ಭಾರತ ಸಹಿತ 35 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ಘೋಷಿಸಿದ ಶ್ರೀಲಂಕಾ
PC : PTI
ಕೊಲಂಬೊ : ತೀವ್ರ ಬಿಕ್ಕಟ್ಟಿನಲ್ಲಿರುವ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ, ಚೀನಾ ಸಹಿತ 35 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ಒದಗಿಸುವ ಪ್ರಸ್ತಾವನೆಯನ್ನು ಶ್ರೀಲಂಕಾ ಸಂಪುಟ ಅನುಮೋದಿಸಿದೆ ಎಂದು ಉನ್ನತ ಅಧಿಕಾರಿ ಗುರುವಾರ ಹೇಳಿದ್ದಾರೆ.
ಅಕ್ಟೋಬರ್ 1ರಿಂದ ಆರಂಭವಾಗುವ 6 ತಿಂಗಳ ಪ್ರಾಯೋಗಿಕ ಕಾರ್ಯಕ್ರಮದಡಿ ಪ್ರವಾಸಿಗರಿಗೆ 30 ದಿನಗಳ ವೀಸಾವನ್ನು ನೀಡಲಾಗುವುದು. ಶೀಘ್ರವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಉದ್ಯಮದ ಪ್ರಯೋಜನಗಳನ್ನು ಪಡೆಯಲು ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್ನಂತೆ ಶ್ರೀಲಂಕಾವನ್ನು ಉಚಿತ ವೀಸಾ ದೇಶವಾಗಿ ರೂಪಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಸಂಪುಟದ ವಕ್ತಾರ ಮತ್ತು ಸಾರಿಗೆ ಸಚಿವ ಬಂಡುಲ ಗುಣವರ್ದನ ಹೇಳಿದ್ದಾರೆ. ಭಾರತ, ಚೀನಾ, ಬ್ರಿಟನ್, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಸ್ಪೇನ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲ್ಯಾಂಡ್, ಕಝಕ್ಸ್ತಾನ್, ಸೌದಿ ಅರೆಬಿಯಾ, ಯುಎಇ, ನೇಪಾಳ, ಇಂಡೊನೇಶ್ಯಾ, ರಶ್ಯ, ಥೈಲ್ಯಾಂಡ್, ಮಲೇಶ್ಯಾ, ಜಪಾನ್ ಮತ್ತು ಫ್ರಾನ್ಸ್ ಸಹಿತ 35 ದೇಶಗಳು ಈ ಪಟ್ಟಿಯಲ್ಲಿವೆ. ಕೋವಿಡ್ -19 ಸಾಂಕ್ರಾಮಿಕ ಹಾಗೂ 2022ರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದ ಪ್ರವಾಸೋದ್ಯಮ ಕುಂಠಿತಗೊಂಡಿತ್ತು. ಆದರೆ ಕಳೆದ ವರ್ಷದಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ಮೂಲಕ ಆದಾಯ ಗಳಿಸುವುದು ಸರಕಾರದ ಉದ್ದೇಶವಾಗಿದೆ.