ಚೀನಾದ ಸಂಶೋಧನಾ ನೌಕೆಗಳಿಗೆ 1 ವರ್ಷ ನಿಷೇಧ ವಿಧಿಸಿದ ಶ್ರೀಲಂಕಾ
ಕೊಲಂಬೊ : ಚೀನಾದ ಯಾವುದೇ ಸಂಶೋಧನಾ ನೌಕೆಗಳಿಗೆ ತನ್ನ ಬಂದರುಗಳಲ್ಲಿ ತಂಗಲು ಅಥವಾ ತನ್ನ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯಾಚರಿಸಲು ಒಂದು ವರ್ಷದವರೆಗೆ ಅನುಮತಿಸುವುದಿಲ್ಲ ಎಂದು ಶ್ರೀಲಂಕಾವು ಭಾರತಕ್ಕೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಜುಲೈಯಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆಯನ್ನು ಭೇಟಿಯಾಗಿದ್ದ ಸಂದರ್ಭ ಭಾರತದ ಕಾರ್ಯತಂತ್ರ ಮತ್ತು ಭದ್ರತಾ ಕಾಳಜಿಯನ್ನು ಗೌರವಿಸುವಂತೆ ಪ್ರಧಾನಿ ಮೋದಿ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇದರೊಂದಿಗೆ, ದಕ್ಷಿಣ ಹಿಂದೂ ಮಹಾಸಾಗರದಲ್ಲಿ 2024ರ ಜನವರಿ 5ರಿಂದ ಆಳ ಸಮುದ್ರದ ಪರಿಶೋಧನೆ ನಡೆಸುವ ಚೀನಾದ ವೈಜ್ಞಾನಿಕ ಸಂಶೋಧನಾ ನೌಕೆ `ಕ್ಸಿಯಾಂಗ್ ಯಾಂಗ್ ಹಾಂಗ್-3'ಯ ಯೋಜನೆಗೆ ಶ್ರೀಲಂಕಾದ ಅಧಿಕಾರಿಗಳಿಂದ ಕ್ಲಿಯರೆನ್ಸ್ ಲಭಿಸುವ ಸಾಧ್ಯತೆ ದೂರವಾಗಿದೆ. ಕೊಲಂಬೋದಲ್ಲಿ ಚೀನೀ ನೌಕೆಯ ಸಂಶೋಧನೆ ಹಾಗೂ ಅದಕ್ಕೆ ಶ್ರೀಲಂಕಾದ ನೆರವಿಗೆ ಅಮೆರಿಕವೂ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಿಶ್ವಬ್ಯಾಂಕ್‍ನಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವ ಶ್ರೀಲಂಕಾಕ್ಕೆ ಅಮೆರಿಕದ ಬೆಂಬಲದ ಅಗತ್ಯವಿದೆ. ಅಕ್ಟೋಬರ್- ನವೆಂಬರ್‍ನಲ್ಲಿ ಚೀನಾದ ಸಂಶೋಧನಾ ನೌಕೆ ಶಿಯಾನ್-6 ಶ್ರೀಲಂಕಾದ ಇಲಾಖೆಯೊಂದಿಗೆ ನಡೆಸಿದ ಜಂಟಿ ಕಡಲ ಸಮೀಕ್ಷೆಗೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮಾಲ್ದೀವ್ಸ್‍ನಲ್ಲಿ ಚೀನಾ ಪರ ಒಲವು ಹೊಂದಿರುವ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆ ದ್ವೀಪರಾಷ್ಟ್ರದಲ್ಲೂ ಚೀನಾ ಆಳಸಮುದ್ರ ಸಂಶೋಧನೆಗೆ ತನ್ನ ನೌಕೆಯನ್ನು ರವಾನಿಸುತ್ತಿದೆ.