2019ರ ಈಸ್ಟರ್ ಬಾಂಬ್ ದಾಳಿ ಕುರಿತು ಹೊಸದಾಗಿ ತನಿಖೆಗೆ ಆದೇಶಿಸಿದ ಶ್ರೀಲಂಕಾ ಅಧ್ಯಕ್ಷ
PHOTO : NDTV
ಕೊಲೊಂಬೊ: ಶ್ರೀಲಂಕಾದ ಹಾಲಿ ಬೇಹುಗಾರಿಕಾ ಮುಖ್ಯಸ್ಥರ ಪಾತ್ರದಿಂದ 2019ರ ಈಸ್ಟರ್ ನಲ್ಲಿ ನಾಗರಿಕರ ಮೇಲೆ ಅತ್ಯಂತ ಕೆಟ್ಟ ದಾಳಿ ನಡೆಯುವಂತಾಯಿತು ಎಂದು ಬ್ರಿಟಿಷ್ ಟೆಲಿವಿಷನ್ ಸಾಕ್ಷ್ಯಚಿತ್ರವೊಂದು ಆರೋಪಿಸಿರುವುದರಿಂದ ಶ್ರೀಲಂಕಾದ ಅಧ್ಯಕ್ಷರು ಹೊಸದಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
2019ರ ಈಸ್ಟರ್ ರವಿವಾರದ ದಾಳಿಯಲ್ಲಿ ಹಾಲಿ ಸ್ಟೇಟ್ ಇಂಟಲಿಜೆನ್ಸ್ ಸರ್ವೀಸಸ್ ಮುಖ್ಯಸ್ಥ ಸುರೇಶ್ ಸ್ಯಾಲ್ಲೆ ಪಾತ್ರವಿತ್ತು ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸಿದ್ದಾರೆ.
ಇಸ್ಲಾಂ ಉಗ್ರವಾದಿಗಳು ಮೂರು ಚರ್ಚ್ ಗಳು ಹಾಗೂ ಮೂರು ಹೋಟೆಲ್ ಗಳ ಮೇಲೆ ದಾಳಿ ನಡೆಸಿ, 45 ವಿದೇಶೀಯರು ಸೇರಿದಂತೆ 279 ಮಂದಿಯನ್ನು ಕೊಂದ ಘಟನೆಯಲ್ಲಿ ಸುರೇಶ್ ಸ್ಯಾಲ್ಲೆಯ ಪಾತ್ರವಿತ್ತು ಎಂದು ರಾಜಕೀಯದ ಒಳಹೊರಗು ಬಲ್ಲವರೊಬ್ಬರು ಆರೋಪಿಸಿರುವ ಸಾಕ್ಷ್ಯಚಿತ್ರವನ್ನು ಈ ವಾರ ಪ್ರಸಾರ ಮಾಡಲಾಗಿತ್ತು.
“ದೇಶವು ಅತ್ಯಂತ ಸಂಕಷ್ಟ ಕಾಲ ಘಟ್ಟದಲ್ಲಿ ಹಾದು ಹೋಗುತ್ತಿರುವಾಗ, ಅಧ್ಯಕ್ಷ ವಿಕ್ರಮಸಿಂಘೆ ಕ್ರಮವು ಈ ತೀವ್ರತರವಾದ ಆರೋಪಗಳ ಸತ್ಯವನ್ನು ಬಯಲು ಮಾಡುವ ಮತ್ತು ಹೊಣೆಗಾರಿಕೆಯನ್ನು ಖಾತ್ರಿಗೊಳಿಸುವ ದೃಢ ನಿರ್ಣಯವನ್ನು ಪ್ರತಿನಿಧಿಸುತ್ತದೆ” ಎಂದು ಅವರ ಕಚೇರಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.
ನೂತನ ತನಿಖೆಯಲ್ಲಿ ಪತ್ತೆಯಾಗುವ ಅಂಶಗಳನ್ನು ಸಂಸದೀಯ ಸಮಿತಿಯ ಕ್ರಮಕ್ಕಾಗಿ ಶಿಫಾರಸು ಮಾಡಲಾಗುತ್ತದೆ.
ಆದರೆ, ಈ ಕುರಿತು ಚಾನೆಲ್ 4ಗೆ ಪ್ರತಿಕ್ರಿಯಿಸಿರುವ ಬೇಹುಗಾರಿಕಾ ಮುಖ್ಯಸ್ಥರು, ಬಾಂಬ್ ದಾಳಿ ನಡೆದಾಗ ನಾನು ದೇಶದಲ್ಲಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಇದನ್ನು ಅಲ್ಲಗಳೆದಿರುವ ಸುರೇಶ್ ಸ್ಯಾಲ್ಲೆಯ ಮಾಜಿ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸರತ್ ಫೊನ್ಸೇಕಾ, ಸುರೇಶ್ ಸ್ಯಾಲ್ಲೆ ಹಲವಾರು ಪಾಸ್ ಪೋರ್ಟ್ ಗಳನ್ನು ಬಳಸಿಕೊಂಡು ವಿದೇಶಕ್ಕೆ ಪ್ರಯಾಣಿಸಿದ್ದರು ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.