ಬಾಲ್ಟಿಮೋರ್ ಸೇತುವೆಗೆ ಡಿಕ್ಕಿಯಾದ ಹಡಗು ಅಮೆರಿಕದಿಂದ ಶ್ರೀಲಂಕಾಕ್ಕೆ ತ್ಯಾಜ್ಯ ಸಾಗಿಸುತ್ತಿತ್ತು: ವರದಿ
ಸಾಂದರ್ಭಿಕ ಚಿತ್ರ (X/@OsintTV)
ಕೊಲಂಬೊ: ಕಳೆದ ವಾರ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿಯಾದ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಅಪಾಯಕಾರಿ ಸರಕುಗಳ ಸ್ವರೂಪದ ಬಗ್ಗೆ ಶ್ರೀಲಂಕಾಕ್ಕೆ ಮಾಹಿತಿಯಿಲ್ಲ ಎಂದು ಶ್ರೀಲಂಕಾದ ಅಧಿಕಾರಿಗಳು ಹೇಳಿದ್ದಾರೆ.
ಈ ಹಡಗಿನಲ್ಲಿ ಅಮೆರಿಕದಿಂದ ವಿಷಕಾರಿ ತ್ಯಾಜ್ಯಗಳನ್ನು ಶ್ರೀಲಂಕಾಕ್ಕೆ ಸಾಗಿಸಲಾಗುತ್ತಿತ್ತು ಎಂದು ವರದಿಯಾಗಿದೆ. ನಿಯಮದಂತೆ, ಕೊಲಂಬೊ ಬಂದರು ಪ್ರವೇಶಿಸುವ 72 ಗಂಟೆಗಳ ಮೊದಲು ಹಡಗಿನಲ್ಲಿ ಸಾಗಿಸುವ ಸರಕುಗಳ ಬಗ್ಗೆ ಆ ಸಂಬಂಧಪಟ್ಟ ಬಂದರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾರ್ಚ್ 26ರಂದು ಬಾಲ್ಟಿಮೋರ್ನ ಫ್ರಾನ್ಸಿಸ್ ಸ್ಕಾಟ್ ಸೇತುವೆಯ ಕಂಬಕ್ಕೆ ಡಿಕ್ಕಿಯಾಗಿದ್ದ ಸಿಂಗಾಪುರದ ಧ್ವಜ ಹೊಂದಿದ್ದ `ಡಾಲಿ' ಸರಕು ನೌಕೆಯ ಸಿಬಂದಿಗಳಲ್ಲಿ ಹೆಚ್ಚಿನವರು ಭಾರತೀಯರಾಗಿದ್ದಾರೆ. 984 ಅಡಿ ಉದ್ದದ ಸರಕು ನೌಕೆ ಶ್ರೀಲಂಕಾದ ಕೊಲಂಬೊ ಬಂದರಿನತ್ತ ಪ್ರಯಾಣಿಸುತ್ತಿತ್ತು. ಈ ಹಡಗಿನಲ್ಲಿ 764 ಟನ್ಗಳಷ್ಟು ಅಪಾಯಕಾರಿ ಸರಕುಗಳಿದ್ದವು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ 57 ಕಂಟೈನರ್ ಗಳಲ್ಲಿ ಅಂತರಾಷ್ಟ್ರೀಯ ಜಲಸಾರಿಗೆ ಅಪಾಯಕಾರಿ ಸರಕು ಸಂಹಿತೆಯಡಿ ವಿಷಕಾರಿ ತ್ಯಾಜ್ಯವೆಂದು ವರ್ಗೀಕರಿಸಿರುವ ಸರಕುಗಳಿದ್ದವು. ಕ್ಷಾರೀಯ ದ್ರಾವಣ (ಆಸಿಡ್ನಂತೆ ಅಪಾಯಕಾರಿ), ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ತ್ಯಾಜ್ಯಗಳು, ವಿವಿಧ ಅಪಾಯಕಾರಿ ವಸ್ತುಗಳು ಮತ್ತು ಸ್ಫೋಟಕಗಳು ಸೇರಿದಂತೆ ವರ್ಗ-9ರಡಿ ಬರುವ ಅಪಾಯಕಾರಿ ವಸ್ತುಗಳಿದ್ದವು. ಹಡಗಿನಲ್ಲಿದ್ದ ಇತರ 4,644 ಕಂಟೈನರ್ ಗಳಲ್ಲಿ ಏನಿತ್ತು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಂಸ್ಥೆ ಹೇಳಿದೆ.
ಬಾಲ್ಟಿಮೋರ್ಗೂ ಮುನ್ನ ನ್ಯೂಯಾರ್ಕ್ ಮತ್ತು ವರ್ಜೀನಿಯಾ ನಗರಗಳ ಬಂದರಿನಲ್ಲಿ ತಂಗಿದ್ದ ಈ ಹಡಗು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ಹೋಪ್ ಮೂಲಕ 27 ದಿನಗಳ ಪ್ರಯಾಣದ ಬಳಿಕ ಎಪ್ರಿಲ್ 21ರಂದು ಕೊಲಂಬೊ ಬಂದರು ತಲುಪಬೇಕಿತ್ತು. ನಿಯಮದ ಪ್ರಕಾರ ಅದಕ್ಕೂ 72 ಗಂಟೆಗಳ ಮೊದಲು ಹಡಗಿನಲ್ಲಿರುವ ಸರಕುಗಳ ಬಗ್ಗೆ ಬಂದರಿನ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು. ಅಂದರೆ ನಮಗೆ ಎಪ್ರಿಲ್ 17ರಂದು ಮಾಹಿತಿ ದೊರಕಬೇಕಿದೆ. ಇನ್ನೂ ಸಾಕಷ್ಟು ಸಮಯವಿದೆ. ಒಂದು ವೇಳೆ ವಿಷಕಾರಿ ತ್ಯಾಜ್ಯಗಳಿದ್ದರೆ ಅಂತಹ ಸರಕನ್ನು ನಿರ್ವಹಿಸುವ ಬಗ್ಗೆ ನಮ್ಮಲ್ಲಿ ಸೂಕ್ತ ಕಾರ್ಯವಿಧಾನವಿದೆ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧ್ಯಕ್ಷ ಕೀತ್ ಬೆರ್ನಾರ್ಡ್ ಹೇಳಿದ್ದಾರೆ. ಆದರೆ ಬಾಸೆಲ್ ಸಮಾವೇಶದ ನಿರ್ಣಯದ ಪ್ರಕಾರ ವಿಷಕಾರಿ ತ್ಯಾಜ್ಯದ ಸರಕನ್ನು ದೇಶದೊಳಗೆ ಸಾಗಿಸಲು ಅವಕಾಶವಿಲ್ಲ. ಹಡಗಿನಲ್ಲಿ ವಿಷಕಾರಿ ತ್ಯಾಜ್ಯಗಳಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಶ್ರೀಲಂಕಾದ ಕೇಂದ್ರ ಪರಿಸರ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಜಿತ್ ವಿಜೆಸುಂದರ ಹೇಳಿದ್ದಾರೆ.