ಕೋಮುದ್ವೇಷ ಪ್ರಚೋದನೆ: ಶ್ರೀಲಂಕಾದ ಬೌದ್ಧ ಧರ್ಮಗುರುವಿಗೆ 9 ತಿಂಗಳು ಜೈಲು
ಸಾಂದರ್ಭಿಕ ಚಿತ್ರ
ಕೊಲಂಬೊ: ಇಸ್ಲಾಂ ಧರ್ಮದ ನಿಂದನೆ ಹಾಗೂ ಆ ಮೂಲಕ ದೇಶದಲ್ಲಿ ಕೋಮುದ್ವೇಷವನ್ನು ಪ್ರಚೋದಿಸಿದ್ದಕ್ಕಾಗಿ ಶ್ರೀಲಂಕಾದ ಬೌದ್ಧ ಧರ್ಮಗುರುವೊಬ್ಬನಿಗೆ ಸ್ಥಳೀಯ ನ್ಯಾಯಾಲಯವು ಎರಡನೆ ಬಾರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.
2016ರಲ್ಲಿ ಮಾಡಿದ ಇಸ್ಲಾಂ ವಿರೋಧಿ ಭಾಷಣಕ್ಕಾಗಿ ಬೌದ್ಧ ಧರ್ಮಗುರು ಗಾಲಗೊದ್ದಟ್ಟೆ ಜ್ಞಾನಶೇಖರನಿಗೆ ಗುರುವಾರ ಕೊಲಂಬೊ ನ್ಯಾಯಾಲಯ 9 ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕಳೆದ ವರ್ಷದ ಈತನಿಗೆ ಶ್ರೀಲಂಕಾದ ಅಲ್ಪಸಂಖ್ಯಾತ ಮುಸ್ಲಿಮರ ಅವಹೇಳನಗೈದ ಆರೋಪಕ್ಕೆ ಸಂಬಂಧಿಸಿ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.
ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ನಿಕಟವರ್ತಿಯಾದ ಜ್ಞಾನಶೇಖರನನ್ನು 2021ರಲ್ಲಿ ಧಾರ್ಮಿಕ ಸಾಮರಸ್ಯದ ಖಾತರಿಗಾಗಿ ಶ್ರೀಲಂಕಾದ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಣೆ ತರಲು ರಚಿಸಲಾದ ಸಮಿತಿಯ ವರಿಷ್ಠನನ್ನಾಗಿ ನೇಮಿಸಲಾಗಿತ್ತು.
ನಾಪತ್ತೆಯಾಗಿರುವ ವ್ಯಂಗ್ಯಚಿತ್ರಕಾರನೊಬ್ಬನ ಪತ್ನಿಗೆ ಜೀವಬೆದರಿಕೆಯೊಡ್ಡಿದ್ದ ಆರೋಪಕ್ಕಾಗಿ 2018ರಲ್ಲಿ ಜ್ಞಾನಶೇಖರನಿಗೆ 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಆಗಿನ ರಾಷ್ಟ್ರಾಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕ್ಷಮಾದಾನ ನೀಡಿದ್ದರಿಂದ 9 ತಿಂಗಳುಗಳ ಬಳಿಕ ಆತ ಬಿಡುಗಡೆಗೊಂಡಿದ್ದನು.