ಸುಧಾರಣೆಯ ಹಾದಿಯಲ್ಲಿ ಶ್ರೀಲಂಕಾದ ಅರ್ಥವ್ಯವಸ್ಥೆ: ಐಎಂಎಫ್
Photo: PTI
ವಾಷಿಂಗ್ಟನ್: ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಹೇಳಿದೆ.
2022ರಲ್ಲಿ 70%ಕ್ಕೆ ತಲುಪಿದ್ದ ದೇಶದ ಹಣದುಬ್ಬರ ಪ್ರಮಾಣ ಕಳೆದ ತಿಂಗಳು 5.9%ಕ್ಕೆ ಇಳಿದಿದೆ ಮತ್ತು ಆರ್ಥಿಕತೆಯು ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ವಿಸ್ತರಿಸಿದೆ. 2023ರ ಮೂರನೇ ತ್ರೈಮಾಸಿಕದಲ್ಲಿ ಶ್ರೀಲಂಕಾದ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ 1.6%ದಷ್ಟಿತ್ತು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 4.5%ದಷ್ಟಿತ್ತು ಎಂದು ಐಎಂಎಫ್ ಹೇಳಿದೆ. ಶ್ರೀಲಂಕಾದ ಆರ್ಥಿಕ ಸುಧಾರಣೆಯ ಕುರಿತ ಎರಡನೇ ಅವಲೋಕನ ನಡೆಸುವ ಬಗ್ಗೆ ಐಎಂಎಫ್ ಅಧಿಕಾರಿಗಳ ಜತೆ ಒಪ್ಪಂದಕ್ಕೆ ಬರಲಾಗಿದೆ ಎಂದು ಶ್ರೀಲಂಕಾ ಸರಕಾರ ಹೇಳಿದೆ. ಈ ಒಪ್ಪಂದವನ್ನು ಐಎಂಎಫ್ ಆಡಳಿತ ಮಂಡಳಿ ಅನುಮೋದಿಸಿದರೆ ಶ್ರೀಲಂಕಾಕ್ಕೆ ನೀಡಲಿರುವ ಸಾಲದ ಅಂತಿಮ ಕಂತಾದ 337 ದಶಲಕ್ಷ ಡಾಲರ್ ಮೊತ್ತವನ್ನು ಐಎಂಎಫ್ ಬಿಡುಗಡೆಗೊಳಿಸಲಿದೆ.
2022ರ ಆರಂಭದಲ್ಲಿ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದ್ದ ಶ್ರೀಲಂಕಾದಲ್ಲಿ ಆಹಾರ, ಔಷಧ, ಇಂಧನ, ವಿದ್ಯುತ್ ಮುಂತಾದ ದೈನಂದಿನ ಅಗತ್ಯದ ವಸ್ತುಗಳ ಕೊರತೆ ಹೆಚ್ಚಿತ್ತು. 2022ರ ಎಪ್ರಿಲ್ನಲ್ಲಿ 83 ಶತಕೋಟಿ ಡಾಲರ್ ಸಾಲ ಪಾವತಿಸಲಾಗದೆ ಶ್ರೀಲಂಕಾ ದಿವಾಳಿತನವನ್ನು ಘೋಷಿಸಿತು.
2022ರ ಜುಲೈಯಲ್ಲಿ ರನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ದೇಶದ ಇಂಧನ ಸಮಸ್ಯೆ, ಅಗತ್ಯ ವಸ್ತುಗಳ ಕೊರತೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ದೇಶದ ಕರೆನ್ಸಿ ಬಲಿಷ್ಟಗೊಂಡಿದೆ ಮತ್ತು ಬಡ್ಡಿದರ ಸುಮಾರು 10%ಕ್ಕೆ ಇಳಿದಿದೆ. ಆದರೆ ನಿರುದ್ಯೋಗ ಸಮಸ್ಯೆ, ಅಧಿಕ ತೆರಿಗೆ ಮತ್ತು ಜೀವನ ನಿರ್ವಹಣೆ ವೆಚ್ಚ ಅಧಿಕಗೊಂಡಿರುವ ಬಗ್ಗೆ ಸಾರ್ವಜನಿಕರ ತೀವ್ರ ಆಕ್ರೋಶ ಎದುರಿಸುತ್ತಿದ್ದಾರೆ.