ಶ್ರೀಲಂಕಾ ಸಂಸತ್ ವಿಸರ್ಜನೆ, ನವೆಂಬರ್ 14ಕ್ಕೆ ಚುನಾವಣೆ
PC: x.com/catale7a
ಕೊಲಂಬೊ: ಶ್ರೀಲಂಕಾ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಡಪಂಥೀಯ ನಾಯಕ ಅನುರ ಕುಮಾರ ದಿಸ್ಸನಾಯಕೆ, ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ಘೋಷಿಸಿದ್ದಾರೆ. ಶ್ರೀಲಂಕಾದಲ್ಲಿ ದಶಕದಿಂದ ಜಾರಿಯಲ್ಲಿರುವ ರಾಜಕೀಯ ಕುಟುಂಬಗಳ ಆಡಳಿತಕ್ಕೆ ಬದಲಾವಣೆ ತರುವ ಚುನಾವಣಾ ಆಶ್ವಾಸನೆ ಈಡೇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ಮಂಗಳವಾರ ಮಧ್ಯರಾತ್ರಿಯಿಂದಲೇ ಸಂಸತ್ ವಿಸರ್ಜನೆ ಜಾರಿಗೆ ಬಂದಿದ್ದು, ಹೊಸ ಚುನಾವಣೆಗಳು ನವೆಂಬರ್ 14ರಂದು ನಡೆಯಲಿವೆ ಎಂದು ವಿಶೇಷ ಗಜೆಟ್ ಅಧಿಸೂಚನೆ ಹೇಳಿದೆ. 2020ರ ಆಗಸ್ಟ್ ನಲ್ಲಿ ಶ್ರೀಲಂಕಾ ಸಂಸತ್ತಿಗೆ ಚುನಾವಣೆ ನಡೆದಿತ್ತು. 2025ರ ಆಗಸ್ಟ್ ವರೆಗೆ ಸಂಸತ್ತಿನ ಅವಧಿ ಇದ್ದರೂ, ನಿಗದಿತ ಅವಧಿಗಿಂತ 11 ತಿಂಗಳು ಮುನ್ನವೇ ಸಂಸತ್ ವಿಸರ್ಜನೆಯಾಗಿದೆ.
ದಕ್ಷಿಣ ಏಷ್ಯಾ ದೇಶದ ಆರ್ಥಿಕತೆ 2020ರಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಬಳಿಕ ಇತ್ತೀಚೆಗೆ ನಿಧಾನವಾಗಿ ಪುನಶ್ಚೇತನಗೊಳ್ಳುತ್ತಿದ್ದು, ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ದಿಸ್ಸನಾಯಕೆ ಅವರನ್ನು ಆಯ್ಕೆ ಮಾಡಿತ್ತು.
ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸಾವಿರಾರು ಮಂದಿ ಅಧ್ಯಕ್ಷೀಯ ಅರಮನೆಗೆ ಮುತ್ತಿಗೆ ಹಾಕಿದ್ದರಿಂದ ಆಗ ಅಧ್ಯಕ್ಷರು ದೇಶದಿಂದ ಪಲಾಯನ ಮಾಡಿದ್ದರು. ಮೊನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಲಕ್ಷಾಂತರ ಮಂದಿ ಬದಲಾವಣೆಗಾಗಿ ಮತ ಚಲಾಯಿಸಿದ್ದರು.