ಬ್ರೆಝಿಲ್ ಗೆ ಅಪ್ಪಳಿಸಿದ ಚಂಡಮಾರುತ: 50 ಮಂದಿ ನಾಪತ್ತೆ
Photo: twitter/DemiurgosCaen
ಬ್ರಸೀಲಿಯಾ: ಬ್ರೆಝಿಲ್ನ ದಕ್ಷಿಣ ಭಾಗಕ್ಕೆ ಐದು ದಿನದ ಹಿಂದೆ ಬಿರುಗಾಳಿ ಹಾಗೂ ಧಾರಾಕಾರ ಮಳೆಯೊಂದಿಗೆ ಅಪ್ಪಳಿಸಿದ ಚಂಡಮಾರುತದಿಂದ ವ್ಯಾಪಕ ನಾಶ-ನಷ್ಟ ಉಂಟಾಗಿದ್ದು ಸುಮಾರು 50 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಚಂಡಮಾರುತದ ಪ್ರಹಾರಕ್ಕೆ ಸಿಲುಕಿ 41 ಮಂದಿ ಮೃತಪಟ್ಟಿದ್ದು ಕನಿಷ್ಟ 223 ಮಂದಿ ಗಾಯಗೊಂಡಿದ್ದಾರೆ. ಸುಮಾರು 11000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಂಗಳವಾರದಿಂದ ಆರಂಭಗೊಂಡಿರುವ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಸುಮಾರು 50 ಮಂದಿ ನಾಪತ್ತೆಯಾಗಿದ್ದಾರೆ.
ರಿಯೊ ಗ್ರಾಂಡೆ ದೊಸುಲ್ ರಾಜ್ಯದಲ್ಲಿ ವ್ಯಾಪಕ ವಿನಾಶ ಸಂಭವಿಸಿದ್ದು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸುಮಾರು 15,000 ಜನರು ತುರ್ತು ನೆರವಿನ ನಿರೀಕ್ಷೆಯಲ್ಲಿದ್ದು ಫೆಡರಲ್ ಸರಕಾರ 20,000 ಆಹಾರ ಕಿಟ್ಗಳನ್ನು ರವಾನಿಸಿದೆ.
ಸಾವಿರಕ್ಕೂ ಅಧಿಕ ರಕ್ಷಣಾ ಕಾರ್ಯಕರ್ತರು 12 ಹೆಲಿಕಾಪ್ಟರ್ಗಳು, 8 ಯುದ್ಧವಿಮಾನ, ಸುಮಾರು 100ರಷ್ಟು ಯೋಧರನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಹಲವು ಸೇತುವೆ ಕುಸಿದಿರುವುದರಿಂದ ಹಾಗೂ ರಸ್ತೆಗಳು ಹಾನಿಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ.
ಉಪಾಧ್ಯಕ್ಷ ಜೆರಾಲ್ಡೊ ಅಕ್ಮಿನ್ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲ ಡ'ಸಿಲ್ವ ಹೇಳಿದ್ದಾರೆ. ಲೂಯಿಝ್ ಈಗ ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.