ರಶ್ಯದಲ್ಲಿ ಪ್ರಜಾಪ್ರಭುತ್ವ ಪರ ಹೋರಾಟ ಮುಂದುವರಿಯಲಿದೆ : ವಿಪಕ್ಷ ಮುಖಂಡರ ಹೇಳಿಕೆ
Photo: NDTV
ಮಾಸ್ಕೋ: ನನ್ನ ಎದೆಯಲ್ಲಿ ಹೃದಯ ಬಡಿತ ಇರುವವರೆಗೆ ನಾನು ದೌರ್ಜನ್ಯದ ವಿರುದ್ಧ ಹೋರಾಡುತ್ತೇನೆ. ನಾನು ಬದುಕಿರುವವರೆಗೂ ಯಾವುದೇ ಕೆಟ್ಟ ಶಕ್ತಿಗಳಿಗೆ ಹೆದರುವುದಿಲ್ಲ ಎಂದು ಜೈಲಿನಲ್ಲಿರುವ ರಶ್ಯ ವಿಪಕ್ಷ ಮುಖಂಡ ಇಲ್ಯ ಯಶಿನ್ ಹೇಳಿದ್ದಾರೆ.
`ನನ್ನ ಮಿತ್ರ ಮತ್ತು ಸಹೋದ್ಯೋಗಿ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಮೃತಪಟ್ಟಿರುವ ಸುದ್ಧಿ ತಿಳಿಯಿತು. ನಾವಿಬ್ಬರೂ ಸಮಾನ ಕಾರಣವನ್ನು ಹಂಚಿಕೊಂಡಿದ್ದೇವೆ ಮತ್ತು ರಶ್ಯವನ್ನು ಶಾಂತಿಯುತ, ಮುಕ್ತ ಮತ್ತು ಸಂತೋಷದ ತಾಣವನ್ನಾಗಿ ಮಾಡಲು ನಮ್ಮ ಬದುಕನ್ನು ಮುಡಿಪಾಗಿಟ್ಟಿದ್ದೇವೆ. ಈಗ ನನ್ನ ಇಬ್ಬರೂ ಮಿತ್ರರು ಸಾವನ್ನಪ್ಪಿದ್ದಾರೆ. ಆದರೆ ಈ ಹೋರಾಟವನ್ನು ನಾನು ಮುಂದುವರಿಸಲಿದ್ದೇನೆ. ರಶ್ಯವನ್ನು ಪ್ರಜಾಪ್ರಭುತ್ವ ದೇಶವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ' ಎಂದು ಯಶಿನ್ ಹೇಳಿದ್ದಾರೆ. ಮತ್ತೊಬ್ಬ ವಿಪಕ್ಷ ಮುಖಂಡ ಬೋರಿಸ್ ನೆಮ್ಸ್ತೋವ್ 2015ರಲ್ಲಿ ಕ್ರೆಮ್ಲಿನ್ ಬಳಿ ಹತ್ಯೆಗೊಳಗಾಗಿದ್ದರು.
`ಹತ್ಯೆ, ಕ್ರೂರತ್ವ ಮತ್ತು ಹಗೆ ಸಾಧನೆಯ ಮೂಲಕ ಅಧಿಕಾರ ಚಲಾಯಿಸಬಹುದು ಎಂಬುದು ಪುಟಿನ್ ಭಾವನೆಯಾಗಿದೆ' ಎಂದು ಯಶಿನ್ ಟೀಕಿಸಿದ್ದಾರೆ. ನಾನು ಎದುರಿಸುತ್ತಿರುವ ಅಪಾಯದ ಬಗ್ಗೆ ನನಗೆ ತಿಳಿದಿದೆ. ನಾನು ಕಂಬಿಯ ಹಿಂದೆ ಇದ್ದೇನೆ ಮತ್ತು ನನ್ನ ಜೀವ ಪುಟಿನ್ ಕೈಯಲ್ಲಿದೆ ಮತ್ತು ಅಪಾಯದಲ್ಲಿದೆ ಎಂಬುದೂ ತಿಳಿದಿದೆ ಎಂದವರು ಹೇಳಿದ್ದಾರೆ.
ಉಕ್ರೇನ್ ಮೇಲಿನ ದಾಳಿಯನ್ನು ವಿರೋಧಿಸಿ ನೀಡಿದ್ದ ಹೇಳಿಕೆಗಾಗಿ `ರಶ್ಯ ಸೇನೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಿದ' ಅಪರಾಧಕ್ಕಾಗಿ 2022ರಲ್ಲಿ ಯಶಿನ್ಗೆ 8 ವರ್ಷ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ.