ಸುಡಾನ್ | ಆಸ್ಪತ್ರೆಯ ಮೇಲೆ ಡ್ರೋನ್ ದಾಳಿ 30 ಮಂದಿ ಮೃತ್ಯು; ಹಲವರಿಗೆ ಗಾಯ

PC : NDTV
ಖಾರ್ಟೂಮ್ : ಸುಡಾನ್ ನ ಡಾರ್ಫುರ್ ಪ್ರದೇಶದ ಎಲ್-ಫಾಶರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ವೈದ್ಯಕೀಯ ಮೂಲಗಳು ಶನಿವಾರ ಹೇಳಿವೆ.
ಎಲ್-ಫಾಶರ್ ನಗರದಲ್ಲಿರುವ ಸೌದಿ ಆಸ್ಪತ್ರೆಯ ಮೇಲೆ ಶುಕ್ರವಾರ ಸಂಜೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಲಾಗಿದ್ದು ತುರ್ತು ಚಿಕಿತ್ಸೆ ನಡೆಸುತ್ತಿದ್ದ ಕಟ್ಟಡ ನೆಲಸಮಗೊಂಡಿದ್ದು ಆಸ್ಪತ್ರೆಗೆ ತೀವ್ರ ಹಾನಿಯಾಗಿದೆ. ಇದೇ ಕಟ್ಟಡಕ್ಕೆ ಕೆಲ ವಾರಗಳ ಹಿಂದೆ ಅರೆಸೇನಾ ಪಡೆ (ಆರ್ಎಸ್ಎಫ್) ಡ್ರೋನ್ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
2023ರ ಎಪ್ರಿಲ್ನಿಂದ ಸುಡಾನ್ ಸೇನೆ ಹಾಗೂ ಅರೆಸೇನಾ ಪಡೆ `ರ್ಯಾಪಿಡ್ ಸಪೋರ್ಟ್ ಫೋರ್ಸಸ್(ಆರ್ಎಸ್ಎಫ್) ನಡುವೆ ತೀವ್ರ ಯುದ್ಧ ನಡೆಯುತ್ತಿದೆ. ಡಾರ್ಫುರ್ ಪ್ರದೇಶದ ಬಹುತೇಕ ಪಶ್ಚಿಮ ಪ್ರಾಂತ ಆರ್ಎಸ್ಎಫ್ನ ವಶದಲ್ಲಿದೆ. ಜತೆಗೆ, ಅರೆಸೇನಾ ಪಡೆ ಉತ್ತರ ಡಾರ್ಫುರ್ ನ ರಾಜಧಾನಿ ಎಲ್-ಫಾಶರ್ ಮೇಲೆ ಕಳೆದ ವರ್ಷದ ಮೇ ತಿಂಗಳಿಂದಲೂ ಮುತ್ತಿಗೆ ಹಾಕಿದೆ. ಆದರೆ ರಾಜಧಾನಿಯನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನವನ್ನು ಸೇನೆಯನ್ನು ಬೆಂಬಲಿಸುವ ಸ್ಥಳೀಯ ಸಶಸ್ತ್ರ ಹೋರಾಟಗಾರರ ಗುಂಪು ನಿರಂತರ ವಿಫಲಗೊಳಿಸುತ್ತಿದೆ.
ಎಲ್-ಫಾಶರ್ ನಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲಿನ ದಾಳಿಗಳು ಅತಿರೇಕವಾಗಿದ್ದು ಇಲ್ಲಿ ಸೌದಿ ಆಸ್ಪತ್ರೆ ಶಸ್ತ್ರಚಿಕಿತ್ಸೆ ಸೌಲಭ್ಯ, ಸಾಮರ್ಥ್ಯವನ್ನು ಹೊಂದಿರುವ ಏಕೈಕ ಸಾರ್ವಜನಿಕ ಆಸ್ಪತ್ರೆಯಾಗಿದೆ.
ಯುದ್ಧದಿಂದಾಗಿ ದೇಶದಾದ್ಯಂತ 80%ದಷ್ಟು ಆರೋಗ್ಯ ಸೌಲಭ್ಯಗಳು ನಿಷ್ಕ್ರಿಯಗೊಂಡಿವೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಎಲ್-ಫಾಶರ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳಾಂತರಗೊಂಡವರಿಗಾಗಿ ನಿರ್ಮಿಸಲಾದ ಮೂರು ಶಿಬಿರಗಳಲ್ಲಿ ಈಗಾಗಲೇ ಬರಗಾಲದ ಛಾಯೆ ಆವರಿಸಿದೆ. ಸುಡಾನ್ ನ ಯುದ್ಧ ಇದುವರೆಗೆ ಸಾವಿರಾರು ಜನರನ್ನು ಬಲಿಪಡೆದುಕೊಂಡಿದ್ದು 1.2 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಮತ್ತು ಲಕ್ಷಾಂತರ ಜನರಿಗೆ ಆಹಾರದ ಅಭದ್ರತೆ ಎದುರಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.