ಸುಡಾನ್: ಆಸ್ಪತ್ರೆಯ ಮೇಲಿನ ದಾಳಿಯಲ್ಲಿ ಮೃತರ ಸಂಖ್ಯೆ 70ಕ್ಕೆ ಏರಿಕೆ

PC : PTI
ಖಾರ್ಟೂಮ್: ಸುಡಾನ್ ನ ಡಾರ್ಫುರ್ ಪ್ರದೇಶದ ಎಲ್-ಫಾಶರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೇಸಸ್ ರವಿವಾರ ಹೇಳಿದ್ದಾರೆ.
ಎಲ್-ಫಾಶರ್ ನಗರದಲ್ಲಿರುವ ಸೌದಿ ಆಸ್ಪತ್ರೆಯ ಮೇಲೆ ಶುಕ್ರವಾರ ಸಂಜೆ ಡ್ರೋನ್ ಮೂಲಕ ನಡೆದ ಬಾಂಬ್ ದಾಳಿಗೆ ಅರೆಸೇನಾ ಪಡೆ (ಆರ್ಎಸ್ಎಫ್) ಹೊಣೆ ಎಂದು ಸ್ಥಳೀಯರು ದೂಷಿಸಿದ್ದಾರೆ. ದಾರ್ಫುರ್ ಪ್ರದೇಶದಲ್ಲಿ ಆಗಿರುವ ಹಿನ್ನಡೆಯಿಂದ ಹತಾಶೆಗೊಂಡಿರುವ ಆರ್ಎಸ್ಎಫ್ ಅಮಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಸೇನಾಪಡೆ ಆರೋಪಿಸಿದೆ.
ಎಲ್-ಫಾಶರ್ ನ ಸೌದಿ ಆಸ್ಪತ್ರೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ ರೋಗಿಗಳು ಮತ್ತು ಅವರ ಸಹಚರರು ಸೇರಿದಂತೆ 70 ಮಂದಿ ಸಾವನ್ನಪ್ಪಿದ್ದು ಇತರ 19 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಸಂದರ್ಭ ಆಸ್ಪತ್ರೆಯು ರೋಗಿಗಳಿಂದ ತುಂಬಿತ್ತು. ಉತ್ತರ ದಾರ್ಫುರ್ ನ ಅಲ್ ಮಲ್ಹಾದ ಆರೋಗ್ಯ ಕೇಂದ್ರದ ಮೇಲೆಯೂ ಶನಿವಾರ ದಾಳಿ ನಡೆದಿದೆ. ಸುಡಾನ್ ನಲ್ಲಿ ಆರೋಗ್ಯ ರಕ್ಷಣೆಯ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು ಮತ್ತು ಹಾನಿಗೊಳಗಾದ ಸೌಲಭ್ಯಗಳ ತ್ವರಿತ ಮರುಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸುಡಾನ್ ನ ಜನತೆ ಶಾಂತಿಯನ್ನು ಬಯಸುತ್ತಿದ್ದಾರೆ. ಶಾಂತಿಯೇ ಅತ್ಯುತ್ತಮ ಔಷಧ' ಎಂದು ಘೆಬ್ರೆಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.