ಅರೆಸೇನಾ ಪಡೆಯು ಸಮಾನಾಂತರ ಸರಕಾರ ಘೋಷಿಸಿದರೆ ಸುಡಾನ್ ಬಿಕ್ಕಟ್ಟು ತೀವ್ರ: ವಿಶ್ವಸಂಸ್ಥೆ ಎಚ್ಚರಿಕೆ

PC ; un.org/en/
ಖಾರ್ಟೂಮ್ : ಸೇನಾಪಡೆಯೊಂದಿಗೆ ಯುದ್ಧದಲ್ಲಿ ನಿರತರಾಗಿರುವ ಅರೆಸೇನಾ ಪಡೆಯು ಸಮಾನಾಂತರ ಸರಕಾರ ಘೋಷಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಸುಡಾನ್ನಲ್ಲಿನ ಬಿಕ್ಕಟ್ಟು ಮತ್ತಷ್ಟು ಹದಗೆಡಬಹುದು ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ.
ಈಗ ಸುಡಾನ್ನ ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಸಂರಕ್ಷಿಸುವುದು ನಮ್ಮ ಎದುರು ಇರುವ ಮೊದಲ ಆದ್ಯತೆಯಾಗಿದೆ ಮತ್ತು ಇದು ಬಿಕ್ಕಟ್ಟಿಗೆ ಶಾಶ್ವತ ಮತ್ತು ಸುಸ್ಥಿರ ಪರಿಹಾರ ರೂಪಿಸುವಾಗ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.
ನೈರೋಬಿಯಲ್ಲಿ ಈ ವಾರದ ಆರಂಭದಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಅರೆಸೇನಾ ಪಡೆಯ ನಿಯೋಗ ದೇಶದಲ್ಲಿ ಶಾಂತಿಯ ಮತ್ತು ಏಕತೆಯ ಸರಕಾರ ರಚನೆಗೆ ಹಾದಿ ಮಾಡಿಕೊಡುವ ದಾಖಲೆ ಮತ್ತು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಘೋಷಿಸಿದೆ. ಸುಡಾನ್ನಲ್ಲಿ ಅಧಿಕಾರ ನಿಯಂತ್ರಣಕ್ಕಾಗಿ ಸೇನಾ ಪಡೆ ಹಾಗೂ ಅರೆಸೇನಾ ಪಡೆ (ರ್ಯಾಪಿಡ್ ಸಪೋರ್ಟ್ ಫೋರ್ಸಸ್) ಕಳೆದ 2 ವರ್ಷಗಳಿಂದ ಭೀಕರ ಸಂಘರ್ಷ ಮುಂದುವರಿದಿದೆ. ಸಭೆಯಲ್ಲಿ ಮೂಡಿಬಂದ ಅಭಿಪ್ರಾಯದಂತೆ ನಿರ್ಣಯಕ್ಕೆ ಸಹಿ ಹಾಕುವ ಪ್ರಕ್ರಿಯೆಯನ್ನು ಮಂಗಳವಾರ (ಫೆಬ್ರವರಿ 18)ಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ಬಳಿಕ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾರ್ಯಕ್ರಮವನ್ನು ಶುಕ್ರವಾರ(ಫೆ.21)ಕ್ಕೆ ಮುಂದೂಡಲಾಗಿದೆ