ಸುಡಾನ್: ಅರೆ ಸೇನಾಪಡೆಯ ದಾಳಿಯಲ್ಲಿ 6 ಮಂದಿ ಸಾವು

ಸಾಂದರ್ಭಿಕ ಚಿತ್ರ | Photo: NDTV
ಪೋರ್ಟ್ ಸುಡಾನ್: ಉತ್ತರ ದಾರ್ಫುರ್ ನ ಎಲ್-ಫಶರ್ ಪ್ರದೇಶದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಅರೆ ಸೇನಾಪಡೆ ನಡೆಸಿದ ಫಿರಂಗಿ ದಾಳಿಯಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸುಡಾನ್ನಲ್ಲಿ 2023ರ ಎಪ್ರಿಲ್ನಿಂದ ಅರೆ ಸೇನಾಪಡೆ(ರ್ಯಾಪಿಡ್ ಸಪೋರ್ಟ್ ಫೋರ್ಸಸ್) ಹಾಗೂ ಸಶಸ್ತ್ರ ಪಡೆಗಳ ನಡುವೆ ಭೀಕರ ಸಂಘರ್ಷ ನಡೆಯುತ್ತಿದ್ದು ಸಾವಿರಾರು ಸಾವು-ನೋವು ಸಂಭವಿಸಿದೆ. ಬುಧವಾರ ಅರೆ ಸೇನಾಪಡೆಯು ಉತ್ತರ ದಾರ್ಫುರ್ನಲ್ಲಿ ಕ್ಷಾಮದಿಂದ ತತ್ತರಿಸಿರುವ ಅಬು ಶೌಕ್ ಶಿಬಿರದ ಮೇಲೆ ಫಿರಂಗಿ ದಾಳಿ ನಡೆಸಿದೆ ಎಂದು ಸ್ಥಳೀಯ ಸ್ವಯಂ ಸೇವಕರ ಗುಂಪು ಹೇಳಿದೆ. ಇದೇ ಶಿಬಿರದ ಮೇಲೆ 2 ದಿನಗಳ ಹಿಂದೆ ನಡೆದಿದ್ದ ಫಿರಂಗಿ ದಾಳಿಯಲ್ಲಿ 50ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ದಾರ್ಫುರ್ನ ಪಶ್ಚಿಮ ಭಾಗದಲ್ಲಿ ಸೇನೆಯ ನಿಯಂತ್ರಣದಲ್ಲಿರುವ ಕಡೆಯ ಪ್ರಮುಖ ನಗರವಾದ ಎಲ್-ಫಶರ್ಗೆ ಕಳೆದ ಒಂದು ತಿಂಗಳಿಂದ ಮುತ್ತಿಗೆ ಹಾಕಿರುವ ಅರೆ ಸೇನಾಪಡೆ ನಗರವನ್ನು ವಶಪಡಿಸಿಕೊಳ್ಳಲು ತೀವ್ರ ಪ್ರಯತ್ನ ಮುಂದುವರಿಸಿದ್ದು ಅಪಾರ ಸಾವು-ನೋವು ಸಂಭವಿಸಿದೆ. ದಾರ್ಫುರ್ ಪ್ರಾಂತದ ಬಹುತೇಕ ಭಾಗ ಅರೆ ಸೇನಾಪಡೆಯ ನಿಯಂತ್ರಣದಲ್ಲಿದ್ದರೆ, ಸೇನೆಯು ಉತ್ತರ ಮತ್ತು ಪೂರ್ವ ಭಾಗದ ಮೇಲೆ ನಿಯಂತ್ರಣ ಉಳಿಸಿಕೊಂಡಿದೆ.
ಸಶಸ್ತ್ರ ಪಡೆ ಹಾಗೂ ಅರೆ ಸೇನಾಪಡೆಯ ನಡುವೆ ಸುಮಾರು 2 ವರ್ಷದಿಂದ ಮುಂದುವರಿದಿರುವ ಸಂಘರ್ಷದಲ್ಲಿ ಅಪಾರ ಸಾವು-ನೋವು ಸಂಭವಿಸಿದ್ದು 12 ದಶಲಕ್ಷಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಇದುವರೆಗಿನ ಅತೀ ದೊಡ್ಡ ಮಾನವೀಯ ಬಿಕ್ಕಟ್ಟು ಇದಾಗಿದೆ. ಸುಮಾರು 2 ದಶಲಕ್ಷ ಮಂದಿಗೆ ಆಹಾರದ ಅಭದ್ರತೆ ಎದುರಾಗಿದ್ದರೆ 3,20,000 ಜನರು ಬರಗಾಲದ ಛಾಯೆಯಡಿ ಸಿಲುಕಿದ್ದಾರೆ ಎಂದು ಅಂತರಾಷ್ಟ್ರೀಯ ರಕ್ಷಣಾ ಸಮಿತಿ ವರದಿ ಮಾಡಿದೆ.