ಸುಡಾನ್: ಬಾಂಬ್ ದಾಳಿಯಲ್ಲಿ 7 ಮೃತ್ಯು ; 23 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಪೋರ್ಟ್ ಸುಡಾನ್: ದಕ್ಷಿಣ ಸುಡಾನ್ ನಲ್ಲಿ ಇತ್ತೀಚೆಗೆ ಸೇನಾಪಡೆ ಮರುವಶಕ್ಕೆ ಪಡೆದಿರುವ ನಗರದ ಮೇಲೆ ಅರೆ ಸೇನಾಪಡೆ ನಡೆಸಿದ ಬಾಂಬ್ ದಾಳಿಯಲ್ಲಿ 7 ನಾಗರಿಕರು ಸಾವನ್ನಪ್ಪಿದ್ದು 23 ಮಂದಿ ಗಾಯಗೊಂಡಿರುವುದಾಗಿ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ನಾರ್ಥ್ ಕೊರ್ಡೊಫಾನ್ ರಾಜ್ಯದ ರಾಜಧಾನಿ ಎಲ್-ಒಬೈದ್ ಮೇಲೆ ರವಿವಾರ ಅರೆ ಸೇನಾ ಪಡೆ ಭೀಕರ ಬಾಂಬ್ ಮತ್ತು ಶೆಲ್ ದಾಳಿ ನಡೆಸಿದೆ. ಪ್ರಯಾಣಿಕರಿಂದ ತುಂಬಿದ್ದ ಬಸ್ಸಿನ ಮೇಲೆ ನಡೆದ ಶೆಲ್ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದು ಇತರ 23 ಮಂದಿ ಗಾಯಗೊಂಡಿದ್ದಾರೆ ಎಂದು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಸುಡಾನ್ ರಾಜಧಾನಿ ಖಾರ್ಟೂಮ್ ಅನ್ನು ಪಶ್ಚಿಮದ ದಾರ್ಫುರ್ ಪ್ರಾಂತಕ್ಕೆ ಸಂಪರ್ಕಿಸುವ ಆಯಕಟ್ಟಿನ ನಗರ ಎಲ್-ಒಬೈದ್ ಅನ್ನು ಸುಮಾರು 2 ವರ್ಷದ ಬಳಿಕ ಕಳೆದ ತಿಂಗಳು ಮರಳಿ ವಶಪಡಿಸಿಕೊಳ್ಳಲು ಸೇನಾಪಡೆ ಯಶಸ್ವಿಯಾಗಿತ್ತು. ದಾರ್ಫುರ್ ಪ್ರಾಂತದ ಬಹುತೇಕ ಪ್ರದೇಶ ಅರೆ ಸೇನಾಪಡೆಯ ವಶದಲ್ಲಿದ್ದರೆ, ಉತ್ತರ ಮತ್ತು ಪೂರ್ವ ಸುಡಾನ್ನ ಹೆಚ್ಚಿನ ಭಾಗ ಸೇನಾಪಡೆಯ ನಿಯಂತ್ರಣದಲ್ಲಿದೆ.