ಸುಡಾನ್: ವಾಯುದಾಳಿಯಲ್ಲಿ ಕನಿಷ್ಟ 22 ಮಂದಿ ಮೃತ್ಯು
Photo: ANI
ಖಾರ್ಟಮ್: ಪಶ್ಚಿಮದ ಆಮ್ಡರ್ಮನ್ ನಗರದ ಮೇಲೆ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಟ 22 ಮಂದಿ ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಈ ದಾಳಿಗೆ ಸೇನೆ ಮತ್ತು ಅರೆಸೇನಾ ಪಡೆ ಪರಸ್ಪರರ ಮೇಲೆ ದೋಷಾರೋಪ ಹೊರಿಸಿವೆ. ಎಪ್ರಿಲ್ 15ರಂದು ಸಂಘರ್ಷ ಆರಂಭಗೊಂಡ ಬಳಿಕ ಅರೆಸೇನಾ ಪಡೆ ಕ್ರಮೇಣ ರಾಜಧಾನಿ ಖಾರ್ಟಮ್ ಮತ್ತು ಅದರ ನೆರೆಯ ನಗರ ಆಮ್ಡರ್ಮನ್ ಮೇಲೆ ನಿಯಂತ್ರಣ ಸಾಧಿಸುತ್ತಿದೆ.
ಅರೆಸೇನಾ ಪಡೆಯ ಹಿಡಿತದಲ್ಲಿರುವ ದಾರ್ಫುರ್ ಪ್ರಾಂತದಿಂದ ತನ್ನ ಪಡೆಯನ್ನು ಸಾಗಿಸಲು ಆಮ್ಡರ್ಮನ್ ನಗರದ ಮೂಲಕ ಸುಲಭ ದಾರಿಯಿರುವುದರಿಂದ ಆಮ್ಡರ್ಮನ್ ನಗರದ ಮೇಲೆ ನಿಯಂತ್ರಣ ಸಾಧಿಸಲು ಅರೆಸೇನಾ ಪಡೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಡಾನ್ ಸೇನೆ ಈ ವಾಯುದಾಳಿ ನಡೆಸಿದೆ ಎಂದು ಅರೆಸೇನಾ ಪಡೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಆಮ್ಡರ್ಮನ್ ನಗರದಲ್ಲಿ ವೈಮಾನಿಕ ದಾಳಿಯ ಬಳಿಕ ವ್ಯಾಪಕ ಹಾನಿಯಾಗಿರುವ ವೀಡಿಯೊವನ್ನು ಸುಡಾನ್ನ ಆರೋಗ್ಯ ಇಲಾಖೆ ಪೋಸ್ಟ್ ಮಾಡಿದೆ. ವಿಶೇಷ ಪಡೆಯು 20 ಬಂಡುಗೋರ ಯೋಧರನ್ನು ಹತ್ಯೆ ಮಾಡಿದ್ದು ಬಂಡುಗೋರರ ವ್ಯಾಪಕ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಿದೆ ಎಂದು ಸೇನಾಪಡೆ ಟ್ವೀಟ್ ಮಾಡಿದೆ.