ಸುಡಾನ್ ಅಂತರ್ಯುದ್ಧ; ಎರಡು ದಿನಗಳಲ್ಲಿ 300ಕ್ಕೂ ಅಧಿಕ ಮೃತ್ಯು
ಅರೆಸೈನಿಕ ಪಡೆಗಳಿಂದ ಬರಗಾಲ ಸಂತ್ರಸ್ತರ ಶಿಬಿರಗಳ ಮೇಲೆ ದಾಳಿ

ಸಾಂದರ್ಭಿಕ ಚಿತ್ರ | PC : NDTV
ವಾಶಿಂಗ್ಟನ್: ಆಫ್ರಿಕದ ರಾಷ್ಟ್ರವಾದ ಸುಡಾನ್ ನಲ್ಲಿ ತಾಂಡವವಾಡುತ್ತಿರುವ ಭೀಕರ ನಾಗರಿಕ ಸಮರ ಆರಂಭಗೊಂಡು ಎರಡು ವರ್ಷ ಸನ್ನಿಹಿತವಾಗಿರುವಂತೆಯೇ ಕಳೆದ ಎರಡು ದಿನಗಳಲ್ಲಿ ದಾರ್ಫರ್ ಪ್ರಾಂತದಲ್ಲಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಮಿತಿ ವರದಿ ಮಾಡಿದೆ.
ಉತ್ತರ ದಾರ್ಫರ್ ಹಾಗೂ ರಾಜಧಾನಿಯ ಸಮೀಪದಲ್ಲಿರುವ ಬರಗಾಲ ಸಂತ್ರಸ್ತರ ಎರಡು ಶಿಬಿರಗಳ ಮೇಲೆ ಸುಡಾನ್ ನ ಕುಖ್ಯಾತ ಅರೆಸೈನಿಕ ಪಡೆಯ ಯೋಧರು ನಡೆಸಿದ ದಾಳಿಗಳಲ್ಲಿ 20 ಮಕ್ಕಳು ಹಾಗೂ 9 ನೆರವು ಕಾರ್ಯಕರ್ತರು ಸೇರಿದಂತೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಆದರೆ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಾರ್ಯಾಲಯ (ಓಸಿಎಚ್ಎ)ವು ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಅಧಿಕವಾಗಿದೆಯೆಂದು ಹೇಳಿದೆ.
2023ರ ಎಪ್ರಿಲ್ 15ರಂದು ಸುಡಾನ್ ರಾಜಧಾನಿ ಖಾರ್ತೂಮ್ ನಲ್ಲಿ ಸೇನೆ ಹಾಗೂ ಅರೆಸೈನಿಕ ಪಡೆಗಳ ನಡುವೆ ಭುಗಿಲೆದ್ದ ಭೀಕರ ಕಾಳಗವು ದೇಶದ ಇತರ ಪ್ರಾಂತಗಳಿಗೂ ಹರಡಿತು. ಆವಾಗಿನಿಂದ ಕನಿಷ್ಠ 24 ಸಾವಿರಕ್ಕೂ ಅಧಿಕ ಮಂದಿ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆ ತಿಳಿಸಿದೆ.
ಸುಡಾನ್ ಸೇನೆಯು ಕಳೆದ ತಿಂಗಳು ಖಾರ್ತೂಮ್ ನಗರದ ಮೇಲೆ ನಿಯಂತ್ರಣವನ್ನು ಮರಳಿ ಪಡೆದುಕೊಂಡ ಬಳಿಕ ಅದು ಅರೆಸೈನಿಕ ಪಡೆಯಾದ ಆರ್ಎಸ್ಎಫ್ ತನ್ನ ದಾಳಿಯ್ನು ತೀವ್ರಗೊಳಿಸಿದೆ.
ಈ ಸಂಘರ್ಷವು ಜಗತ್ತಿನ ಅತಿ ದೊಡ್ಡ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ ಹಾಗೂ ಲಕ್ಷಾಂತರ ಮಂದಿಯನ್ನು ನಿರ್ವಸಿತಗೊಳಿಸಿದೆ. ಬರದಿಂದ ತತ್ತರಿಸಿರುತ್ತಿವ ಸುಡಾನ್ಗೆ ಈ ಸಂಘರ್ಷವು ಗಾಯದ ಮೇಲೆ ಬರೆ ಎಳೆದಂತಾಗಿದೆ.