ಸುಡಾನ್ | ಸಂಘರ್ಷದಲ್ಲಿ ಯುದ್ಧಾಪರಾಧದ ಸಾಧ್ಯತೆ: ವಿಶ್ವಸಂಸ್ಥೆ ವರದಿ
Photo: PTI
ಜಿನೆವಾ: ಸುಡಾನ್ ನಲ್ಲಿ ಸಂಘರ್ಷದಲ್ಲಿ ನಿರತವಾಗಿರುವ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆಗಳು ಅಂತರ್ಯುದ್ಧದಿಂದ ಕಂಗೆಟ್ಟು ಪಲಾಯನ ಮಾಡುವ ನಾಗರಿಕರ ಮೇಲೆ ದಾಳಿ ನಡೆಸುವ ಜತೆಗೆ ದೌರ್ಜನ್ಯ ಎಸಗುತ್ತಿರುವುದು ಯುದ್ಧಾಪರಾಧಕ್ಕೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿ ಶುಕ್ರವಾರ ವರದಿ ನೀಡಿದೆ.
ಸುಡಾನ್ನಲ್ಲಿ ಕಳೆದ 10 ತಿಂಗಳಿಂದ ಮುಂದುವರಿದಿರುವ ಸಂಘರ್ಷದ ಸಂದರ್ಭ ಅತ್ಯಾಚಾರ, ಲೈಂಗಿಕ ಹಿಂಸಾಚಾರದ ಪ್ರಕರಣ ಹೆಚ್ಚಿದೆ. ಕನಿಷ್ಟ 118 ಮಂದಿ ಲೈಂಗಿಕ ಹಿಂಸೆಗೆ ಗುರಿಯಾಗಿದ್ದಾರೆ. ಜೊತೆಗೆ ಆಸ್ಪತ್ರೆಗಳು, ಮಾರುಕಟ್ಟೆಗಳು ಹಾಗೂ ಸ್ಥಳಾಂತರಗೊಂಡವರಿಗಾಗಿ ನಿರ್ಮಿಸಿರುವ ಶಿಬಿರಗಳನ್ನು ಗುರಿಯಾಗಿಸಿಯೂ ವಿವೇಚನಾರಹಿತ ದಾಳಿಗಳು ನಡೆದಿದ್ದು, ಇವು ಯುದ್ಧಾಪರಾಧವಾಗಬಹುದು ಎಂದು ವರದಿ ಹೇಳಿದೆ. ಸುಡಾನ್ನಲ್ಲಿ ಯುದ್ಧನಿರತ ಪಡೆಗಳು ಯುದ್ಧಾಪರಾಧ ಎಸಗಿವೆ ಎಂದು ಅಮೆರಿಕ ಈಗಾಗಲೇ ವಿಧ್ಯುಕ್ತವಾಗಿ ನಿರ್ಧರಿಸಿದೆ ಮತ್ತು ಆರ್ಎಸ್ಎಫ್ ಮತ್ತು ಮಿತ್ರ ಸೇನಾಪಡೆಗಳು ಪಶ್ಚಿಮ ದಾರ್ಫುರ್ನಲ್ಲಿ ಜನಾಂಗೀಯ ಶುದ್ಧೀಕರಣದಲ್ಲಿ ತೊಡಗಿದೆ ಎಂದು ಹೇಳಿದೆ.
ಸಂಘರ್ಷದ ಸಂದರ್ಭ ನಡೆದ ಹತ್ಯೆಗಳು ಮತ್ತು ದೌರ್ಜನ್ಯದ ವರದಿಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರನ್ನು ಶಿಕ್ಷಿಸಲಾಗುತ್ತದೆ ಎಂದು ಎರಡೂ ಪಡೆಗಳು ಪ್ರತಿಪಾದಿಸಿವೆ. ಎಪ್ರಿಲ್ನಿಂದ ಡಿಸೆಂಬರ್ ವರೆಗಿನ ಅವಧಿಗೆ ಸಂಬಂಧಿಸಿದ ವರದಿಯು 300ಕ್ಕೂ ಅಧಿಕ ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಉಪಗ್ರಹಗಳು ರವಾನಿಸಿದ ಫೋಟೋಗಳನ್ನು ಆಧರಿಸಿದೆ. ಆರ್ಎಸ್ಎಫ್ ಅಮಾಯಕ ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸುವ ಮಿಲಿಟರಿ ತಂತ್ರವನ್ನು ಬಳಸಿದೆ ಎಂದು ವರದಿ ಹೇಳಿದೆ. ಸುಡಾನ್ ಸಂಘರ್ಷಕ್ಕೆ ಯಾವುದೇ ಮಿಲಿಟರಿ ಪರಿಹಾರವಿಲ್ಲ. ಇಬ್ಬರೂ ಮುಖಂಡರು ಸಂಘರ್ಷ ಅಂತ್ಯಗೊಳಿಸುವ ಬಗ್ಗೆ ಮಾತುಕತೆ ನಡೆಸಬೇಕು. ಸಂಘರ್ಷ ,ಮುಂದುವರಿಯುವುದರಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಬೇಗ ನಾವು ಸಂಘರ್ಷವನ್ನು ಅಂತ್ಯಗೊಳಿಸಬೇಕಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಕನಿಷ್ಟ 12 ಸಾವಿರ ಮಂದಿ ಸಾವು
ಕಳೆದ ವರ್ಷದ ಎಪ್ರಿಲ್ ಮಧ್ಯಭಾಗದಲ್ಲಿ ಸುಡಾನ್ ರಾಜಧಾನಿ ಖಾರ್ಟಮ್ನಲ್ಲಿ ಸಂಘರ್ಷ ಭುಗಿಲೆದ್ದಿತ್ತು. ಜನರಲ್ ಅಬ್ದುಲ್ ಫತಾಹ್ ಬುರ್ಹಾನ್ ನೇತೃತ್ವದ ಸಶಸ್ತ್ರ ಪಡೆ ಮತ್ತು ಜನರಲ್ ಮುಹಮ್ಮದ್ ಹಮ್ದನ್ ಡಗಾಲೊ ನೇತೃತ್ವದ ರ್ಯಾಪಿಡ್ ಸಪೋರ್ಟ್ ಫೋರ್ಸ್(ಆರ್ಎಸ್ಎಫ್) ಎಂಬ ಅರೆಸೇನಾ ಪಡೆಯ ಘಟಕದ ನಡುವೆ ರಾಜಧಾನಿಯಲ್ಲಿ ಆರಂಭವಾದ ಸಂಘರ್ಷ ಶೀಘ್ರದಲ್ಲೇ ದೇಶದ ಇತರೆಡೆಗೆ, ಮುಖ್ಯವಾಗಿ ಪಶ್ಚಿಮ ದಾರ್ಫುರ್ ಪ್ರಾಂತಕ್ಕೆ ವ್ಯಾಪಿಸಿದೆ. 10 ತಿಂಗಳಿಂದ ಮುಂದುವರಿದಿರುವ ಸಂಘರ್ಷದಲ್ಲಿ ಇದುವರೆಗೆ ಕನಿಷ್ಟ 12 ಸಾವಿರ ಮಂದಿ ಸಾವನ್ನಪ್ಪಿದ್ದು 8 ದಶಲಕ್ಷಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಇದರಲ್ಲಿ ಬಹುತೇಕ ಕೃತ್ಯಗಳು ಯುದ್ಧಾಪರಾಧಕ್ಕೆ ಸಮವಾಗಬಹುದು. ಬಂದೂಕುಗಳ ಸದ್ದಡಗಬೇಕು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್ ವರದಿಯ ಜತೆಗಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.