ದಾರ್ಫರ್ನಲ್ಲಿ ಸೂಡಾನ್ ಸೇನೆಯಿಂದ ವಾಯುದಾಳಿ
100ಕ್ಕೂ ಅಧಿಕ ಮಂದಿ ಮೃತ್ಯು, 300ಕ್ಕೂ ಅಧಿಕ ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC :PTI
ಖಾರ್ತೂಮ್ : ಉತ್ತರ ದಾರ್ಫರ್ನ ಮಾರುಕಟ್ಟೆ ಪ್ರದೇಶವೊಂದರ ಮೇಲೆ ಸೋಮವಾರ ಸೂಡಾನ್ ಸೇನೆ ನಡೆಸಿದ ವಾಯುದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಿಪ್ಪಿದ್ದಾರೆ ಹಾಗೂ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಜಾಪ್ರಭುತ್ವ ಪರ ನ್ಯಾಯವಾದಿಗಳ ಸಂಘಟನೆಯೊಂದು ತಿಳಿಸಿದೆ.
ಮೇ ತಿಂಗಳಿನಿಂದೀಚೆಗೆ ಸೂಡಾನ್ನ ಅರೆಸೈನಿಕ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸ್ (ಆರ್ಎಸ್ಎಫ್)ನ ವಶದಲ್ಲಿರುವ ಉತ್ತರ ದಾರ್ಫರ್ ರಾಜ್ಯದ ಕಬಕಾಬಿಯಾ ಪಟ್ಟಣದ ಮೇಲೆ ಈ ದಾಳಿ ನಡೆದಿದೆ.
ಸೂಡಾನ್ನಲ್ಲಿ ಸೇನೆ ಹಾಗೂ ಆರ್ಎಸ್ಎಫ್ ನಡುವೆ ಕಳೆದ 20 ತಿಂಗಳುಗಳಿಂದ ನಡೆಯುತ್ತಿರು ಭೀಕರ ಯುದ್ಧದಲ್ಲಿ 10 ಸಾವಿರಕ್ಕ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ.
ಕಬಕಾಬಿಯಾ ನಗರದ ವಾರದ ಸಂತೆ ನಡೆಯುತ್ತಿದ್ದ ಮಾರುಕಟ್ಟೆ ಪ್ರದೇಶದ ಮೇಲೆ ದಾಳಿ ನಡೆದಿದೆ. ಸಂತೆಯ ದಿನವಾದ್ದರಿಂದ ಬಾರೀ ಸಂಖ್ಯೆಯ ಜನರು ಮಾರುಕಟ್ಟೆಯಲ್ಲಿ ಜಮಾಯಿಸಿದ್ದರಿಂದ ಭಾರೀ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ನ್ಯಾಯವಾದಿಗಳ ಸಂಘಟನೆ ತಿಳಿಸಿದೆ.
ವಾಯುದಾಳಿಗೆ ತುತ್ತಾದ ಮಾರುಕಟ್ಟೆ ಪ್ರದೇಶದಲ್ಲಿ ಅವಶೇಷಗಳ ನಡುವೆ ಇದ್ದ ಸುಟ್ಟು ಕರಕಾಲದ ಮಕ್ಕಳ ಮೃತದೇಹಗಳನ್ನು ದುಃಖತಪ್ತ ಜನರು ಕೊಂಡೊಯ್ಯುತ್ತಿರುವ ಕರುಣಾಜನಕ ದೃಶ್ಯಗಳ ವೀಡಿಯೋವನ್ನು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.